Advertisement

ಬಸ್‌ಪಾಸ್‌ ದರ ಹೆಚ್ಚಳ ಕೈಬಿಡಿ: ಭಾನುಪ್ರಸಾದ್‌

04:05 PM Jun 19, 2019 | Naveen |

ಚಳ್ಳಕೆರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳ ನಡುವೆ ಶಾಲಾ- ಕಾಲೇಜುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವಾಸ್ತವ ಸ್ಥಿತಿಯನ್ನು ಅರಿಯದೆ ಏಕಾಏಕಿ ಬಸ್‌ ಪಾಸ್‌ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ಖಂಡಿಸುತ್ತದೆ ಎಂದು ಎಬಿವಿಪಿ ತಾಲೂಕು ಸಂಚಾಲಕ ಭಾನುಪ್ರಸಾದ್‌ ಹೇಳಿದರು.

Advertisement

ಬಸ್‌ ಪಾಸ್‌ ದರ ಏರಿಕೆ ವಿರುದ್ಧ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ಸರ್ಕಾರ ವಿದ್ಯಾರ್ಥಿಗಳ ಪಾಸ್‌ ದರವನ್ನು ಹೆಚ್ಚಿಸದೆ ಸಹಕರಿಸಿತ್ತು. ಬಹುತೇಕ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಪಾಸ್‌ ಪಡೆದು ನಿತ್ಯ ಶಾಲಾ-ಕಾಲೇಜುಗಳಿಗೆ ಓಡಾಡುತ್ತಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಸೂಚನೆ ನೀಡದೆ ವಿದ್ಯಾರ್ಥಿಗಳ ಪಾಸ್‌ ದರವನ್ನು ಸಹ ಹೆಚ್ಚಿಸಿರುವುದು ಖಂಡನೀಯ. ಕೂಡಲೇ ಹೆಚ್ಚಿಸಿದ ದರವನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದರು.

ಎಬಿವಿಪಿ ನೇತೃತ್ವದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್ಪಿಪಿಸಿ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಜಗಜೀವನರಾಮ್‌ ವೃತ್ತ, ವಾಲ್ಮೀಕಿ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ನೆಹರೂ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಹಶೀಲ್ದಾರ್‌ ಕಚೇರಿಯಲ್ಲಿ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ವೈಭವ ಬಾದ್ವಿ, ನಗರ ಘಟಕದ ಸಂಚಾಲಕ ಲವಕುಮಾರ್‌, ತೇಜು, ವೆಂಕಟೇಶ್‌, ಅಮರ್‌, ಶಿವು ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next