Advertisement

ಸಿದ್ದುಗೆ ಚಡ್ಡಿ ಕಳುಹಿಸಲಾಗುವುದು; ಚಲವಾದಿ ನಾರಾಯಣಸ್ವಾಮಿ ತಿರುಗೇಟು

10:01 PM Jun 05, 2022 | Team Udayavani |

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಡ್ಡಿ ಸುಡುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಎಸ್ಸಿ ಮೋರ್ಚಾ ಚಡ್ಡಿಗಳನ್ನು ಸಂಗ್ರಹಿಸಿ, ಪ್ರತಿಪಕ್ಷ ನಾಯಕರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

Advertisement

“ಸಿದ್ದರಾಮಯ್ಯ ಅವರ ಚಡ್ಡಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ಕಿತ್ತುಕೊಂಡು ಕಳುಹಿಸಿದ್ದಾರೆ. ಈಗ ಅವರಿಗೆ ಅಲ್ಲಿ ಲುಂಗಿ- ಪಂಚೆ ಮಾತ್ರ ಉಳಿದಿದೆ. ಹಾಗಾಗಿ, ಅವರಿಗೆ ಚಡ್ಡಿಗಳನ್ನು ಕಳುಹಿಸಿಕೊಡುವಂತೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕಗಳ ಅಧ್ಯಕ್ಷರುಗಳಿಗೆ ಸೂಚಿಸಿದ್ದೇನೆ. ಇದಕ್ಕಾಗಿ ಚಡ್ಡಿಗಳನ್ನು ಸಂಗ್ರಹಿಸಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಮತ್ತು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೆ ಚಡ್ಡಿವರೆಗೆ ಹೋದರು? ಬೇರೇನೂ ಕೆಲಸ ಇಲ್ಲವೇ? ಅವರ ಚಡ್ಡಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ಕಿತ್ತುಕೊಂಡು ಕಳುಹಿಸಲಿಲ್ಲವೇ? ಈಗ ಅವರಿಗೆ ಅಲ್ಲಿ ಲುಂಗಿ- ಪಂಚೆ ಮಾತ್ರ ಉಳಿದಿದೆ ಎಂದು ಟೀಕಿಸಿದರು.

ಅಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ; ಇಡೀ ಕಾಂಗ್ರೆಸ್‌ನವರಿಗೆ ಉಳಿದಿರುವುದು ಚಡ್ಡಿ ಮಾತ್ರ. ಅದನ್ನೂ ಯಾಕೆ ಸುಡುತ್ತೀರಿ? ಚಡ್ಡಿ ಸುಡುವುದಕ್ಕೆ ಡಿ.ಕೆ. ಶಿವಕುಮಾರ್‌ ಬೆಂಬಲವಿದೆಯೇ? ಚಡ್ಡಿ ಸುಡುವ ಮೊದಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ಈಗಾಗಲೇ ನಾವು ಕೋವಿಡ್‌ ಸಂಕಷ್ಟ ಎದುರಿಸುತ್ತಿದ್ದೇವೆ. ಚಡ್ಡಿ ಸುಡುವ ಮೂಲಕ ಆಗುವ ಮಾಲಿನ್ಯದಿಂದ ಜನರಿಗೆ ತೊಂದರೆ ಆಗಬಾರದು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಸಂಪೂರ್ಣವಾಗಿ ತಿಕ್ಕಲುತನದಿಂದ ಮಾತನಾಡುತ್ತಿದ್ದಾರೆ. ಅವರಿಗೆ ಎಲ್ಲಿ ಚಿಕಿತ್ಸೆ ಮಾಡಬೇಕೋ ಗೊತ್ತಾಗುತ್ತಿಲ್ಲ. ಬಹಳ ಚೆನ್ನಾಗಿ ಆಡಳಿತ ಕೊಟ್ಟವರೆಂದು ಅವರು ಹೇಳಿಕೊಂಡಿದ್ದರು. ಹಾಗಿದ್ದರೆ ಜನ ಅವರನ್ನು ಯಾಕೆ ಸೋಲಿಸಿದ್ದಾರೆ? ಅದು ಇನ್ನೂ ಅವರಿಗೆ ಅರ್ಥ ಆಗಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಎಂಟು-ಹತ್ತು ಬಜೆಟ್‌ ಕೊಟ್ಟಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಏನು ಕೊಟ್ಟಿದ್ದರು? ಜನರಿಗೆ ಅರ್ಥವಾಗದ ಬಜೆಟ್‌ ಕೊಟ್ಟಿದ್ದರೇ? ಐಎಎಸ್‌ ಅಧಿಕಾರಿಗಳು ಅಥವಾ ಹಣಕಾಸು ತಜ್ಞರು ಬರೆದುಕೊಟ್ಟಿದ್ದನ್ನು ನಿಂತು ಓದಿದ್ದರೇ ಎಂದು ಕೇಳಿದ ಅವರು, ಸಿದ್ದರಾಮಯ್ಯ ಅವರಿಗೆ ಅರ್ಥವಾಗುವುದು ಚಡ್ಡಿ. ಇನ್ನೂ ಏನೇನಿದೆಯೋ ಅಂತಹವು ಮಾತ್ರ ಅವರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು.

ಪಠ್ಯಪುಸ್ತಕ ಸಂಬಂಧದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಲವಾದಿ ನಾರಾಯಣಸ್ವಾಮಿ, ಅಂಬೇಡ್ಕರ್‌ ಎಂದರೆ ಸಂವಿಧಾನ, ಸಾಮಾಜಿಕನ್ಯಾಯ, ಹೋರಾಟಗಳಿಂದ ದೇಶಕ್ಕೆ ಚಿರಪರಿಚಿತರು. ಅಂಬೇಡ್ಕರ್‌ ಎಂದರೆ ನಮಗೆ ಪ್ರಾಣಕ್ಕಿಂತ ಪ್ರಿಯರಾದವರು. ಆದರೆ, ಒಲ್ಲದವನಿಗೆ ಮೊಸರಿನಲ್ಲೂ ಕಲ್ಲು ಎಂಬಂತಾಗಿದೆ. ಅಂಬೇಡ್ಕರ್‌ ಹೆಸರಿನಲ್ಲೇ ಸರ್ವವೂ ಇದೆ. ಬಾಬಾ ಸಾಹೇಬ್‌, ಡಾಕ್ಟರ್‌, ಸಂವಿಧಾನಶಿಲ್ಪಿ ಎಂಬುದು ಅವರ ಹೆಸರಿನಲ್ಲೇ ಅಡಗಿವೆ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next