Advertisement

ಕಾಂಗ್ರೆಸ್‌ಗೆ ಉಳಿದಿರುವುದು ಚಡ್ಡಿ ಮಾತ್ರ: ಛಲವಾದಿ ನಾರಾಯಣ ಸ್ವಾಮಿ

02:19 PM Jun 07, 2022 | Team Udayavani |

ದೊಡ್ಡಬಳ್ಳಾಪುರ: ದೇಶದ ಜನರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಉಳಿದಿರುವುದು ಕೇವಲ ಚಡ್ಡಿ ಮಾತ್ರ. ಸಿದ್ದರಾಮಯ್ಯರ ಅಭಿಯಾನ ನಂಬಿ ಅದಕ್ಕೂ ಬೆಂಕಿ ಹಚ್ಚಿದರೆ, ಕಾಂಗ್ರೆಸಿಗರು ಸಂಪೂರ್ಣ ಬೆತ್ತಲಾಗುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ತಿಪಟೂರಿನಲ್ಲಿರುವ ಮನೆಗೆ ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿದಾಗ, ಬಿ.ಸಿ.ನಾಗೇಶ್‌ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಈ ಕುರಿತಂತೆ ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಆರಂಭಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ದೇಶದಲ್ಲಿ ಉಳಿದಿರುವುದೇ ಚಡ್ಡಿ ಮಾತ್ರ. ಅದಕ್ಕೂ ಬೆಂಕಿ ಹಚ್ಚಿದರೆ, ಬೆತ್ತಲಾಗಿ ಬಿಡುತ್ತಾರೆ ಎಂದರು.

ಅಧಿಕಾರಕ್ಕೆ ದಲಿತರ ಬಳಕೆ: ಕಾಂಗ್ರೆಸ್‌ ಪಕ್ಷ ದಲಿತರನ್ನ ಕೇವಲ ಅಧಿಕಾರಕ್ಕೆ ಬರಲು ಬಳಸಿಕೊಂಡಿದೆ ವಿನಃ ಯಾವುದೇ ಅಧಿಕಾರ ನೀಡಲಿಲ್ಲ. ಬಿಜೆಪಿ ದಲಿತ ವಿರೋಧಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯಲಾಗುತ್ತದೆ ಎಂಬ ಸುಳ್ಳು ವಿಚಾರಗಳನ್ನು ಹರಡುವ ಮೂಲಕ ದಲಿತರನ್ನು ದಾರಿ ತಪ್ಪಿಸುತ್ತಿದ್ದವರಿಗೆ, ಕಳೆದ 8 ವರ್ಷಗಳ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ದಲಿತರಿಗೆ ಸೌಲಭ್ಯಗಳನ್ನು ನೀಡಿ, ಆರ್ಥಿಕವಾಗಿ ಸದೃಢರನ್ನಾಗಿಸಲು ಶ್ರಮಿಸುವ ಮೂಲಕ ತಕ್ಕ ಉತ್ತರವನ್ನು ನೀಡಿದೆ. ದೇಶದ ಪ್ರತಿಯೊಬ್ಬರ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷ ಕಳೆದ 8 ವರ್ಷದಿಂದ ಶ್ರಮಿಸುತ್ತಿದೆ. ದಲಿತರ ಅಭಿವೃದ್ಧಿಗಾಗಿ 60 ಸಾವಿರ ಕೋಟಿ ಅನುದಾನ ಮೀಸಲು, ರೈತರಿಗೆ ಬೆಂಬಲ ಬೆಲೆ, ಪ್ರೋತ್ಸಾಹ ಧನ, ರಸಗೊಬ್ಬರ, ಹಿಂದುಳಿದವರು ಸೇರಿದಂತೆ ಬಲಹೀನರಿಗೆ ಶೈಕ್ಷಣಿಕ, ಆರ್ಥಿಕವಾಗಿ ನೆರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ದೇಶದ ಜನರ ಪ್ರಶಂಸೆ: ಮೋದಿ ಅವರು ಮೊದಲ ಐದು ವರ್ಷದ ಅವಧಿಗೆ ಆಯ್ಕೆಯಾ ದಾಗ ಎದುರಿದ್ದ ಸವಾಲುಗಳನ್ನು ಮೆಟ್ಟಿ ಯಶಸ್ವಿಯಾಗಿ ಆಡಳಿತ ನಡೆಸಿದರು. ಇದನ್ನು ಪರಿಗಣಿಸಿದ ದೇಶದ ಜನರು, 300ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ, ಪುನರ್‌ ಆಯ್ಕೆ ಮಾಡಿದರು. ಆದರೆ, ಈ ವೇಳೆ ಕೋವಿಡ್‌ ಸೋಂಕಿನ ಸಂಕಷ್ಟ ಎದುರಾಗಿದ್ದು, ದೇಶದ ಜನರ ಆರೋಗ್ಯ, ಆರ್ಥಿಕತೆ ನಿಭಾಯಿಸಿದ ರೀತಿ ದೇಶದ ಜನರ ಪ್ರಶಂಸೆ ಪಡೆದಿದೆ ಎಂದರು.

ಮುಂದಿನ ಅವಧಿಗೂ ಬಿಜೆಪಿಗೆ ಅಧಿಕಾರ: 90 ಕೋಟಿ ಲಸಿಕೆ ರಾಷ್ಟ್ರಕ್ಕೆ ನೀಡಿದ ಮೋದಿ ಕಾರ್ಯವನ್ನು ದೇಶದ ಜನರಲ್ಲದೆ, ಇಡೀ ವಿಶ್ವವೇ ಕೊಂಡಾಡುತ್ತಿದೆ. ಕೋವಿಡ್‌ ಸೋಂಕಿನ ಸಂಕಷ್ಟ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆಯಿಂದ 80 ಕೋಟಿ ಜನರಿಗೆ ಆಹಾರ ನೀಡಿದ ಕೀರ್ತಿ ಮೋದಿಯವರದ್ದು, ವಿರೋಧ ಪಕ್ಷದ ಆರೋಪದ ಕಿರುಕುಳದ ನಡುವೆಯೂ, ಜನರ ಸಂಕಷ್ಟಕ್ಕೆ ನೆರವಾಗುವ ಮೂಲಕ, ದೇಶದ ಸುಭದ್ರತೆಗೆ ಆದ್ಯತೆ ನೀಡಿ ಜನಪರ ಆಡಳಿತ ನಡೆಸಲಾಗುತ್ತಿದೆ. ಇದೇ ರೀತಿ ಆಳ್ವಿಕೆ ನಡೆಸಿದರೆ, ಮುಂದಿನ ಅವಧಿಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

Advertisement

ವಿಶ್ವದ ಗಮನ ಸೆಳೆದ ದೇಶದ ಅಭಿವೃದ್ಧಿ: ಬೆಂಗ್ರಾ ಜಿಲ್ಲಾ ವಕ್ತಾರರಾದ ಪುಷ್ಪಾ ಶಿವಶಂಕರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಹಿನ್ನೆಲೆ, ದೇಶದ ಅಭಿವೃದ್ಧಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಮಾಡುವ ಮೂಲಕ ಇಡೀ ವಿಶ್ವದಲ್ಲೇ ಗಮನ ಸೆಳೆಯುವಂತೆ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ಗೋವಿಂದರಾಜು (ಗೋಪಿ), ರಾಜ್ಯ ಸಾಮಾಜಿಕ ಜಾಲತಾಣದ ಸದಸ್ಯ ಶಿವಾನಂದರೆಡ್ಡಿ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ವತ್ಸಲ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next