ನಿತ್ಯವೂ ಚಕ್ಕೋತ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿ ಎನ್ನುತ್ತವೆ ವೈದ್ಯ ಗ್ರಂಥಗಳು. ಅದರಲ್ಲಿರುವ ಪೆಕ್ಟಿನ್, ರಕ್ತದ ಒತ್ತಡ ನಿಯಂತ್ರಿಸಿ ಸುಗಮ ಪರಿಚಲನೆಯ ವೇಗ ಹೆಚ್ಚಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯುಗಳನ್ನು ದೂರವಿಡುತ್ತದೆ ಎಂದೂ ಹೇಳಲಾಗುತ್ತದೆ.
ನಿಂಬೆ, ಮೋಸಂಬಿಗಳಂತೆಯೇ ಸಿಟ್ರಸ್ ಜಾತಿಗೆ ಸೇರಿದ ಹಣ್ಣು ಚಕೋತಾ. ಚೀನಾದೇಶ ಅದರ ತವರೂರು. ಕರಾವಳಿಯಲ್ಲಿ ಧಾರಾಳವಾಗಿ ಬೆಳೆಯಬಲ್ಲುದೆಂಬುದು ತಿಳಿದಿದ್ದರೂ, ರೈತರು ಇದರ ಕೃಷಿಯಲ್ಲಿ ಅನಾಸಕ್ತರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ರೈತ ಮಳೆ ಉಮಾವತಿ, ಚಕೋತದ ಮರಗಳನ್ನು ಪೋಷಿಸಿ ಸಾಕಷ್ಟು ಹಣ್ಣುಗಳನ್ನು ಕೊಯ್ಯುತ್ತಿದ್ದಾರೆ. ಹಣ್ಣಿನೊಳಗಿರುವ ಬೀಜದಿಂದ ಗಿಡ ತಯಾರಿಸಿ ನೆಟ್ಟರೆ ಫಸಲು ಸಿಗಲು ಏಳೆಂಟು ವರ್ಷ ಬೇಕಾಗುತ್ತದೆ. ಆದರೆ ಮರದ ಟೊಂಗೆಯನ್ನು ಕತ್ತರಿಸಿ ಫಲವತ್ತಾದ ಮಣ್ಣಿನಲ್ಲಿ ನೆಟ್ಟು ಗಿಡ ಬೇರೊಡೆಯುವಂತೆ ಮಾಡಿದರೆ ಎರಡನೆಯ ವರ್ಷದಿಂದಲೇ ಹಣ್ಣು ಕೊಡುತ್ತದೆ. ಒಂದು ಮರವಿದ್ದರೆ ಇಡೀ ಜಮೀನಿನಲ್ಲಿ ಅದರ ತಳಿಯನ್ನು ತುಂಬಿಸಬಹುದೆಂದು ಹೇಳುತ್ತಾರೆ ಅವರು.
ದಕ್ಷಿಣ-ಆಗ್ನೇಯ ಏಷ್ಯಾದ ಚಕೋತ ಮರ ಕರಾವಳಿಯ ಹವೆ ಮತ್ತು ಮಣ್ಣಿನ ಗುಣಕ್ಕೆ ಹೊಂದಿಕೊಂಡು ಬದುಕಿ ವರ್ಷದುದ್ದಕ್ಕೂ ಹೂ ಬಿಟ್ಟು ಗೊಂಚಲು ತುಂಬ ಹಣ್ಣುಗಳಿಂದ ಬಾಗಿರುತ್ತದೆ. ಒಂದರಿಂದ ಎರಡು ಕಿ.ಲೋವರೆಗೆ ತೂಗುವ, 15-20 ಸೆ. ಮೀ. ಸುತ್ತಳತೆ ಇರುವ ದುಂಡಗಿನ ಹಣ್ಣಿನೊಳಗೆ ಒಂಭತ್ತರಿಂದ ಹದಿನೈದು ತೊಳೆಗಳಿರುತ್ತವೆ. ಮೋಸಂಬಿಯ ತೊಳೆಗಳಂತೆ ಇದ್ದರೂ ಒಳಗಿನ ಎಸಳುಗಳ ರಸಬಿಂದುಗಳ ಗಾತ್ರ ದೊಡ್ಡದು. ತೊಳೆಗಳ ಮೇಲಿರುವ ಬಿಳಿಯ ಪೊರೆಯಂತಹ ಸಿಪ್ಪೆ ಕಹಿಯಾಗಿದ್ದರೆ ಒಳಗಿರುವ ತೊಳೆ ತೀರಾ ಸಿಹಿಯಾಗಿರುತ್ತದೆ. ಹಾಗೆಯೇ ತಿನ್ನಬಹುದು. ಪಾನಕ, ಜೆಲ್ಲಿ, ಸಿರಪ್ ತಯಾರಿಕೆಗೂ ಸೂಕ್ತವಾಗಿದೆ.
ಚಕೋತ ಪೋಷಕಾಂಶಗಳ ಕಣಜವೂ ಹೌದು. ದೇಹದ ಕೊಬ್ಬು ಕರಗಿಸಲು ನೆರವಾಗುವ ನಾರಿನಂಶ ಹೊಂದಿದೆ. ಎ, ಬಿ1, ಬಿ2, ಬಯೋಫ್ಲಾವೊನೈಡ್, ಆರೋಗ್ಯಕರ ಕೊಬ್ಬು, ಪೊ›ಟೀನ್, ಮೆಗ್ನೇಶಿಯಮ್, ಶೇ. 37ರಷ್ಟು ಪೊಟ್ಯಾಷಿಯಮ್, ಫಾಲಿಕ್ ಮತ್ತು ಆಸ್ಕೊರ್ಬಿಕ್ ಆಮ್ಲಗಳು, ಮೂಳೆಗಳಿಗೆ ಬಲದಾಯಕವಾದ ಕಿಣ್ವಗಳು ಅಲ್ಲದೆ ಅತ್ಯಧಿಕವಾಗಿ ಸಿಹಿ ಜೀವಸತ್ವಗಳ ಆಗರವಾಗಿದೆ. ಇದರಲ್ಲಿರುವ ವಿಶೇಷವಾದ ಸ್ಟರ್ಮೆಡೀಸ್ ಅಂಶವು ಇದನ್ನು ನಿತ್ಯ ಸೇವಿಸುವವರ ದೇಹಕ್ಕೆ ಮುಪ್ಪು ಆವರಿಸಿರುವುದು ಅರಿವಾಗದಷ್ಟು ತ್ವಚೆಯ ಆರೋಗ್ಯದ ರಕ್ಷಣೆಗೆ ಸಹಕರಿಸುತ್ತದೆ.
ನಿತ್ಯವೂ ಚಕ್ಕೋತ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿ ಎನ್ನುತ್ತವೆ ವೈದ್ಯ ಗ್ರಂಥಗಳು. ಅದರಲ್ಲಿರುವ ಪೆಕ್ಟಿನ್, ರಕ್ತದ ಒತ್ತಡ ನಿಯಂತ್ರಿಸಿ ಸುಗಮ ಪರಿಚಲನೆಯ ವೇಗ ಹೆಚ್ಚಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯುಗಳನ್ನು ದೂರವಿಡುತ್ತದೆ ಎಂದೂ ಹೇಳಲಾಗುತ್ತದೆ.
ಚಕೋತದಲ್ಲಿ ಒಳಗಿನ ತಿರುಳಿನ ವರ್ಣ ಬಿಳಿಯಾಗಿರುತ್ತದೆ. ಅಪರೂಪವಾಗಿ ಗುಲಾಬಿ ಬಣ್ಣದ ತಿರುಳಿನ ಜಾತಿಯೂ ಇದೆ. ಗುಣದಲ್ಲಿ ವ್ಯತ್ಯಾಸವಿಲ್ಲ. ಸೌಮ್ಯ ಸಿಹಿಇರುವ ಚಕೋತ ತಿನ್ನುವಾಗ ಅದರ ಜೊತೆಗೆ ಸ್ವಲ್ಪ ಸಕ್ಕರೆ ಸೇರಿಸಿಕೊಂಡರೆ ಸ್ವಾದ ಹೆಚ್ಚುತ್ತದೆ ಎನ್ನುತ್ತಾರೆ ಉಮಾವತಿ. ಬೇಸಗೆಯಲ್ಲಿ ಬುಡಕ್ಕೆ ನೀರು ಹನಿಸಿ, ಒಂದಿಷ್ಟು ಸುಡುಮಣ್ಣು, ಸಾವಯವ ಗೊಬ್ಬರ ನೀಡಿದರೆ ರಾಶಿ ರಾಶಿ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳಿಗೆ ಪೇಟೆಯಲ್ಲಿ ಬೇಡಿಕೆಯೂ ಇದೆ. ಕೀಟಗಳ ಬಾಧೆ ಇಲ್ಲ. ಚಕೋತಾ ಮರ ಹಲವು ವರ್ಷ ಬದುಕುತ್ತದೆ.
– ಪ. ರಾಮಕೃಷ್ಣ ಶಾಸ್ತ್ರೀ