Advertisement

ನ್ಯೂಯಾರ್ಕಿನಲ್ಲಿ ಚೈನಾಟೌನ್‌ ಮುಂಬೈಯಲ್ಲಿ ತಮಿಳುಗಂಧ

10:45 AM Feb 01, 2020 | mahesh |

ಅಮೆರಿಕದ ಪಶ್ಚಿಮ ಕರಾವಳಿಯ ಸಾನ್‌ಫ್ರಾನ್ಸಿಸ್ಕೋ ದಲ್ಲಿರುವ ಚೈನಾಟೌನಿನ ಬೃಹತ್‌ ಸ್ವಾಗತ ಗೋಪುರ ಡ್ರೇಗನ್‌ ಗೇಟನ್ನು ದಾಟಿದರೆ ಅದೊಂದು ಅಪ್ಪಟ ಚೀನೀ ಊರು. ಅಂಗಡಿಗಳಲ್ಲಿ ಎಲ್ಲವೂ ಚೀನೀ ವಸ್ತುಗಳೇ. ಈಗ ನಮ್ಮ ದೇಶದಲ್ಲೂ ಮೇಡ್‌ ಇನ್‌ಚೈನಾ ಆಗಿರದ ವಸ್ತುಗಳನ್ನು ಹುಡುಕಿ ತೆಗೆಯುವುದು ಕಷ್ಟಸಾಧ್ಯವಾಗುತ್ತಿರುವಾಗ ಇದೇನೂ ಆಶ್ಚರ್ಯವಲ್ಲ. ಆದರೂ ಈ ಚೈನಾಟೌನಿನ ನಿವಾಸಿಗಳಿಂದ ಹಿಡಿದು, ಅಲ್ಲಿ ಕೇಳುವ ಭಾಷೆ, ಅಂಗಡಿ-ಮನೆಗಳ ಅಲಂಕಾರ, ಬೋರ್ಡಿನ ಬರಹಗಳು, ಮಾರುವವರು, ಬಹುತೇಕ ಕೊಳ್ಳುವವರೂ- ಎಲ್ಲವೂ ಚೀನೀಮಯ. ಅದೂ ಆಧುನಿಕವಲ್ಲ, ಹಳೆಯ ಚೀನಾದ ಮಾದರಿಯದು.ಅಲ್ಲಿ ಸುತ್ತಾಡುತ್ತಿದ್ದಾಗ ಅಂಗಡಿಯೊಂದರಲ್ಲಿದ್ದ ಪಿಂಗಾಣಿಯ ಗೊಂಬೆ ನಮ್ಮನ್ನು ಆಕರ್ಷಿಸಿತು; ಅದು, ಕೆಲವು ವರ್ಷಗಳ ಕೆಳಗೆ ಚೀನಾದ ಬೀಜಿಂಗ್‌ನ ಬಜಾರಿನಲ್ಲಿ ಕೊಂಡ ಗೊಂಬೆಯ ತದ್ರೂಪವಾಗಿತ್ತು. ಬಾಳೆಹಣ್ಣಿನ ಗೊನೆಯನ್ನು ಒಯ್ಯುತ್ತಿರುವ ತರುಣಿಯ ಆ ಗೊಂಬೆಯ ಕುಸುರಿಕೆಲಸ ಮತ್ತು ವರ್ಣವಿನ್ಯಾಸಗಳು ಕಲಾತ್ಮಕವಾಗಿದ್ದುವು. ಅದೇ ರೀತಿಯ ಗೊಂಬೆ ಮತ್ತೂಂದು ಬೇಕೆಂದರೆ ಬೀಜಿಂಗಿನಲ್ಲೂ ದೊರಕಿರದಿದ್ದಾಗ, ಸಾಗರದಾಚೆ ಇಷ್ಟು ದೂರದಲ್ಲಿ, ಅದೂ ಏಳೆಂಟು ವರ್ಷಗಳ ಮೇಲೆ ಕೈಗೆ ಸಿಕ್ಕಿತೆಂದರೆ! ಈ ಚೈನಾಟೌನ್‌ ಮತ್ತೇನೂ ಅಲ್ಲ, ಚೀನಾದ ಒಂದು ಸಣ್ಣ ತುಂಡು ಪೆಸಿಫಿಕ್‌ ಸಾಗರದಲ್ಲಿ ತೇಲಿಕೊಂಡು ಬಂದು ಅಮೆರಿಕಾದ ಪಡುಕರಾವಳಿಗೆ ಸೇರಿಕೊಂಡದ್ದಿರಬೇಕೆಂದು ನಮಗಾಗ ತೋರಿತು.

Advertisement

ನ್ಯೂಯಾರ್ಕಿನಲ್ಲೂ ಚೈನಾಟೌನ್‌ ಇದ್ದು ಅಲ್ಲೂ ಚೀನಿಯರದ್ದೇ ಕಾರುಬಾರು. ಒಂದು ಕಾಲದಲ್ಲಿ ಕೊಲ್ಕತಾದಲ್ಲೂ ಹೀಗಿನ ಚೀನೀಮಯ ಕೇರಿಗಳಿದ್ದು, ಈಗ ಅವು ಕಡಿಮೆಯಾಗಿವೆ. ಚೀನಿಯರಂತೆ ಭಾರತೀಯ ಮೂಲದವರು ಕೂಡಾ ಕೆಲವು ದೇಶಗಳಲ್ಲಿ ತಮ್ಮದೇ ಕೇರಿಗಳನ್ನು ಕಟ್ಟಿಕೊಂಡಿ¨ªಾರೆ- ನ್ಯೂಜೆರ್ಸಿಯ ಎಡಿಸನ್‌, ನ್ಯೂಯಾರ್ಕಿನ ಕ್ವೀನ್ಸ್‌, ಲಂಡನ್ನಿನ ಸೌತಾಲ್‌, ಸಿಂಗಾಪುರದ ಲಿಟ್ಲ ಇಂಡಿಯ- ಮೊದಲಾದುವು. “ಒಂದೇ ಮೂಲದ ಜನರು- ಸಮಾನ ಪುಕ್ಕದ ಹಕ್ಕಿಗಳು ಒಂದೆಡೆ ಸೇರುತ್ತವೆ’ ಎಂಬ ಇಂಗ್ಲಿಷ್‌ನಾಣ್ಣುಡಿಯಂತೆ, ತಮ್ಮ ಸಮಾನ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಾಗಿರುವುದು ಸಾಮಾನ್ಯ. ಇಂತಹ ಕೇರಿಗಳಲ್ಲಿ ಕೆಲವರು ಆಯಾ ದೇಶದ ಭಾಷೆಯನ್ನೂ ಕಲಿಯದೆ ತಮ್ಮ ಜೀವಮಾನವನ್ನು ಕಳೆಯುವುದಿದೆ. ಚೀನೀಯರು, ಗುಜರಾತಿಗಳು, ಸ್ಪೇನಿಷ್‌ ಮಾತಿನ ಹಿಸ್ಪಾನಿಗಳು, ಹೀಗೆ ಹಲವು ಭಾಷೆ-ಜನಾಂಗ-ಸಂಸ್ಕೃತಿಗಳ ಜನರು ಅಮೆರಿಕದ ಸಾಮಾನ್ಯರೊಂದಿಗೆ ಬೆರೆತೂ ಬೆರೆಯಲಾಗದೆ ಬದುಕು ಸಾಗಿಸುತ್ತಿರುತ್ತಾರೆ.

ಆದರೆ, ಹೀಗೊಂದು ಸಮುದಾಯದ ಮಂದಿ ತಮ್ಮವರೊಂದಿಗೆ ಇರಬೇಕೆಂಬ ಬಯಕೆಯಿಂದ ಕೇರಿಯೊಂದಕ್ಕೆ ಬಂದು ನೆಲಸತೊಡಗಿದಾಗ, ಅದುವರೆಗೆ ಅಲ್ಲಿ ವಾಸಿಸುತ್ತಿದ್ದ ಬೇರೊಂದು ಸಮಾಜದವರಿಗೆ ಅದು ಒಗ್ಗದೆ, ಅವರು ಕ್ರಮೇಣ ಆ ಕೇರಿಯನ್ನು ತೊರೆದು ತಮ್ಮ ಜನರಿರುವ ಇನ್ನೊಂದೇ ಕೇರಿಗೆ ಹೋಗಿ ನೆಲಸುವುದು ಕೂಡ ಅಷ್ಟೇ ಸಾಮಾನ್ಯ. ನ್ಯೂಯಾರ್ಕಿನ ಆಫ್ರಿಕನ್‌-ಅಮೆರಿಕನ್ನರ ಹಾರ್ಲೆಮ್‌, ಭಾರತೀಯರ ಕ್ವೀನ್ಸ್‌ ಮುಂತಾದ ಕೇರಿಗಳು ಹುಟ್ಟಿಕೊಂಡದ್ದು ಹೀಗೆ. ಹೊಸದಾಗಿ ಅಮೆರಿಕಾಕ್ಕೆ ಬಂದಾಗ ಯಹೂದಿಯರಾಗಲಿ, ಐಲೇìಂಡ್‌-ಪೋಲೇಂಡ್‌- ಇಟಲಿ ಮುಂತಾದ ಕಡೆಯ ಬಿಳಿಯರಾಗಲೀ, ತಮ್ಮದೇ ಪ್ರತ್ಯಪ್ರತ್ಯೇಕ ಕೇರಿಗಳನ್ನು ಮಾಡಿಕೊಂಡದ್ದಿದೆ. ಕ್ರಮೇಣ ಈ ಜನರು ದೇಶದ ಸಾಮಾನ್ಯ ಬಿಳಿಯರೊಂದಿಗೆ ಬೆರೆಯತೊಡಗಿದಂತೆ ತಮ್ಮ ಕೇರಿಗಳನ್ನು ತೊರೆಯತೊಡಗಿದರು. ಆದರೂ ನ್ಯೂಯಾರ್ಕಿನ ಲಿಟ್ಲ ಇಟೆಲಿಯಂತಹ ಕೇರಿಗಳು ಇನ್ನೂ ಉಳಿದುಕೊಂಡಿವೆ.

ಅಮೆರಿಕದ ಸಾಮಾನ್ಯ ನಾಗರಿಕರಲ್ಲಿ ಈ ಬಗ್ಗೆ ಇಬ್ಬಗೆಯ ಭಾವನೆಗಳಿವೆ. ಒಂದೆಡೆಯಿಂದ ಹೊಸಬರ ಕ್ರಮಗಳನ್ನು ಅವರಿಗೆ ಸಹಿಸುವುದಾಗುವುದಿಲ್ಲ; ಮತ್ತೂಂದೆಡೆ, ತಮ್ಮದಾಗಿದ್ದ ಕೇರಿಗಳ ಸ್ವರೂಪವನ್ನೇ ಬದಲಾಯಿಸಿದ ಹೊಸಬರು “ಬೆಕ್ಕಿನ ಬಿಡಾರ ಬೇರೆ’ ಎನ್ನುವಂತೆ ಪ್ರತ್ಯೇಕವಾಗಿರುವುದನ್ನೂ ಅವರು ಸಹಿಸಲಾರರು. ಸಹಿಷ್ಣುತೆ-ಸಮಾನತೆಗಳ ಮಾತು ಎಷ್ಟೇ ಇರಲಿ, ಮಾನವ ಸಹಜವಾದ ಸ್ವಜನ ಪ್ರೀತಿಯನ್ನು ಹತ್ತಿಕ್ಕುವುದು ಸುಲಭವಲ್ಲ. ಕೆಲವು ವರ್ಷಗಳ ಕೆಳಗೆ ಜೊಯಲ್‌ ಸ್ಟೈನ್‌ ಎಂಬ ಹಾಸ್ಯ ಲೇಖಕ ಟೈಮ್‌ ನಿಯತಕಾಲಿಕೆಯ ತನ್ನ ಅಂಕಣದಲ್ಲಿ, ತಾನು ಹುಟ್ಟಿಬೆಳೆದ ಎಡಿಸನ್‌ನಲ್ಲಿ ಭಾರತೀಯರು ನೆಲೆಸಲು ಆರಂಭಿಸಿದ ಮೇಲೆ ಅಲ್ಲಿ ಆದ ಬದಲಾವಣೆಗಳ ಬಗ್ಗೆ ಬರೆದಿದ್ದ: “ಅಮೆರಿಕಕ್ಕೆ ಎಷ್ಟೇ ಜನರು ವಲಸೆ ಬರಲಿ, ಆದರೆ, ಎಡಿಸನ್‌ಗೆ ಮಾತ್ರ ಬಾರದಿರಲಿ’ ಎಂಬ ಹಾರೈಕೆಯೊಂದಿಗೆ ಸುರುವಾದ ಲೇಖನದಲ್ಲಿ, ಭಾರತೀಯರು ನೆಲೆಸಿದುದರಿಂದಾಗಿ ತನ್ನೂರು ಎಷ್ಟು ಕುರೂಪಗೊಂಡಿದೆಯೆಂದರೆ ತನಗದರ ಪರಿಚಯವೇ ಸಿಗದಂತಾಗಿದೆಯೆಂದು ಹೇಳುತ್ತ, ಭಾರತೀಯ ಮಹಿಳೆಯರ ಹಣೆಯ ಬಿಂದಿಯಿಂದ ಹಿಡಿದು, ಹಿಂದೂ ದೇವರುಗಳ ವಿಚಿತ್ರ ರೂಪಗಳವರೆಗೆ ವಿನೋದವಾಗಿ ಬರೆಯುತ್ತ ಹೋಗಿದ್ದ. ಎಲ್ಲೋ ಪಾಪ, ಅವನ ಹಾಸ್ಯದ ಸೆಲೆ ಬತ್ತಿಹೋದುದರ ಅರಿವೇ ಅವನಿಗಾಗಿರಲಿಲ್ಲ. ಆತನಾಗಲಿ ಲೇಖನವನ್ನು ಪ್ರಕಟಿಸಿದ ಪತ್ರಿಕೆಯವರಾಗಲಿ ಉದಾರನೀತಿಯವರೇ. ಒಳ್ಳೆಯ ಲೇಖಕನಾದ ಆತನ ಇತರ ಲೇಖನಗಳನ್ನು ನಾನೂ ಓದಿ ಮೆಚ್ಚಿಕೊಂಡಿದ್ದೆ. ಆದರೆ, ಈ ಲೇಖನದಿಂದ ಭಾರತೀಯರು ತೀವ್ರ ರೋಷಗೊಂಡಿದ್ದಂತೂ ನಿಜ.

ಅಂತೂ, ಈ ರೀತಿ ಒಂದು ಸಂಸ್ಕೃತಿ, ಭಾಷೆ ಅಥವಾ ಧರ್ಮದ ಜನರು ನಗರದ ಒಂದು ಭಾಗವನ್ನು ಆಯ್ದುಕೊಂಡು ಅಲ್ಲಿ ನೆಲೆಸಲು ಮೊದಲಿಡುತ್ತಲೇ, ಅಲ್ಲಿನ ಇತರರಾಗಿ ಹೋದ ಮೂಲನಿವಾಸಿಗಳು ಅಲ್ಲಿಂದ ತಮ್ಮವರಿರುವಲ್ಲಿಗೆ ನೆಲೆಸಲು ಹೋಗುವುದು ಎಲ್ಲ ನಗರಗಳಲ್ಲೂ ಕಂಡುಬರುವ ಸಂಗತಿ. ಮುಂಬಯಿಯೂ ಇದಕ್ಕೆ ಹೊರತಲ್ಲ. ಇಲ್ಲಿ ಪ್ರದೇಶದಿಂದ ಪ್ರದೇಶಕ್ಕೆ, ಕೆಲವೊಮ್ಮೆ ರಸ್ತೆಯಿಂದ ರಸ್ತೆಗೆ ದೃಶ್ಯವು ಬದಲಾಗುತ್ತ ಹೋಗುವ ಪರಿ ಅಚ್ಚರಿಯನ್ನುಂಟು ಮಾಡುತ್ತದೆ.

Advertisement

ಮೊಹಮ್ಮದಾಲಿ ರಸ್ತೆಗೆ ಬಂದರೆ, ಅಲ್ಲಿ ಹಾಸುಹೊಕ್ಕಾಗಿರುವ ಮುಸ್ಲಿಂ ಸಂಸ್ಕೃತಿ, ಗಿಜುಗುಡುವ ವ್ಯಾಪಾರ ವಹಿವಾಟು, ತರತರದ ವರ್ಣಮಯ ತಿಂಡಿ-ತಿನಿಸು-ಪಾನೀಯಗಳನ್ನು ಹೇರಿಕೊಂಡ ಕೈಗಾಡಿಗಳ ಸಂಭ್ರಮದ ವಾತಾವರಣ. ದಾದರ್‌, ಶಿವಾಜಿ ಪಾರ್ಕಿನ ಸುತ್ತ ಹುಲುಸಾಗಿ ಬೆಳೆದಿರುವ ಮರಾಠಿ ಸಂಸ್ಕೃತಿಯಿದ್ದರೆ, ಅದರ ನಡುವೆ ಪಾರ್ಸಿಗಳಿಗೇ ವಿಶಿಷ್ಟವಾದ ಅವರದೇ ಛಾಪಿರುವ ಸ್ವತ್ಛ , ಶಾಂತ ವಾತಾವರಣದ ಫೈವ್‌ ಗಾರ್ಡನ್ಸ್‌.

ಮಧ್ಯಮ ವರ್ಗದ ಮಾಟುಂಗವು, ಎಲ್ಲರಿಗೂ ಗೊತ್ತಿದ್ದಂತೆ, ತಮಿಳುನಾಡಿನ ಪರಿಮಳ, ಸದ್ದು, ದೃಶ್ಯಗಳನ್ನು ಯಥಾವತ್ತಾಗಿ ಹೊತ್ತುನಿಂತಿದೆ. ಅಲ್ಲೇ ಮುಂದೆ, ಬದುಕಿನ ಕಾರ್ಪಣ್ಯ-ವೈರುಧ್ಯಗಳೊಡನೆ ಹೋರಾಡುವ ತಮಿಳು ಮತ್ತಿತರ ದಕ್ಷಿಣಭಾರತೀಯರ ಜೋಪಡಿಗಳೂ, ಚಿಕ್ಕಪುಟ್ಟ ಕಾರ್ಖಾನೆಗಳೂ ತುಂಬಿದ ಜನನಿಬಿಡ ಧಾರಾವಿ. ಮುಂದೆ ಸಾಗಿದರೆ, ಸಂಜೆಯ ಇಳಿಹೊತ್ತಿಗೆ ತಲೆಯಲ್ಲಿನ್ನೂ ವ್ಯಾಪಾರ-ವ್ಯವಹಾರ- ಸ್ಟಾಕ್‌ ಮಾರ್ಕೆಟ್‌ಗಳನ್ನು ಹೊತ್ತು ರೈಲಿನಿಂದ ಇಳಿದು ಬರುವ ಗುಜರಾಥಿ ವರ್ತಕರನ್ನು ಮನೆಗೆ ಬರಮಾಡುವ ಘಾಟ್‌ಕೋಪರ್‌. ಹಾಗೆಯೇ, ಉಲ್ಲಾಸ್‌ ನಗರದ ಸಿಂಧಿಗಳು, ಬಾಂದ್ರಾ, ವಸೈಗಳ ಕ್ರೈಸ್ತರು ಆ ಸ್ಥಳಗಳಿಗೆ ತಮ್ಮದೇ ಮೆರುಗನ್ನು ನೀಡಿದ್ದಾರೆ.

ಹೀಗೆ, ತನ್ನಿಂದ ತಾನೇ ರೂಪುಗೊಳ್ಳುವ ಇಂತಹ ವೈವಿಧ್ಯವು ಹಲವು ನಗರಗಳ ದೊಡ್ಡ ಆಕರ್ಷಣೆ.

ಮಿತ್ರಾ ವೆಂಕಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next