ಚಡಚಣ: ಪಟ್ಟಣದ ಪ್ರಮುಖ ಸಿಸಿ ರಸ್ತೆ ಕಾಮಗಾರಿಯು ಸುಮಾರು 9 ತಿಂಗಳಿಂದ ಅರ್ಧಕ್ಕೆ ನಿಂತಿರುವುದನ್ನು ಖಂಡಿಸಿ ಗುರುವಾರ ಪಟ್ಟಣದ ನಾಶಿ ಕಟ್ಟಿಯಲ್ಲಿ ವಿವಿಧ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ನಡೆಸಿದರು.
ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಕರವೇ ವಲಯಾಧ್ಯಕ್ಷ ಸೋಮಶೇಖರ ಬಡಿಗೇರ, ಚಡಚಣ ಪಟ್ಟಣಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ 2018-19 ನೇ ಸಾಲಿನಲ್ಲಿ ಮಂಜೂರಾದ ಸುಮಾರು 4 ಕೋಟಿ ರೂ. ವೆಚ್ಚದ ಪಟ್ಟಣದ ಬಸವೇಶ್ವರ ವೃತ್ತದಿಂದ ಅಗಸಿಯವರೆಗಿನ ಮುಖ್ಯ ರಸ್ತೆ, ಒಳ ಚರಂಡಿ ಹಾಗೂ ಫುಟ್‌ಪಾತ್ ಕಾಮಗಾರಿ ಕೈಗೊಳ್ಳಲಾಗಿತ್ತು.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಕೂಡ ಸ್ಥಳೀಯಾಡಳಿತಕ್ಕೆ ಸಹಕರಿಸಿದ್ದರು. ಅದರಂತೆ ಈ ಕಾಮಗರಿಯು ಸದ್ಯ ಶೇ.50ರಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಸ್ಥಗಿತಗೊಂಡು ಸುಮಾರು 9 ತಿಂಗಳು ಕಳೆದಿವೆ. ಕಾಮಗಾರಿ ಸ್ಥಗಿತಗೊಂಡಿದ್ದರಿಂದ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗೂ ಬಹುಮುಖ್ಯವಾಗಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಸ್ಥಗಿತಗೊಂಡಾಗಿನಿಂದ ರಸ್ತೆ ಬದಿಯ ಅಂಗಡಿಗಳ ವ್ಯಾಪಾರಸ್ಥರ ವ್ಯಾಪಾರ ಕೂಡಾ ಕುಂಟಿತಗೊಂಡಿದ್ದು, ಅನೇಕ ದ್ವಿಚಕ್ರ ವಾಹನ ಸವಾರರು ಅಫಘಾತಕ್ಕೀಡಾಗಿದ್ದಾರೆ. ಮಾ.9 ಸೋಮವಾರದೊಳಗೆ ಸಿಸಿ ರಸ್ತೆ ಕಾಮಗರಿ ಪ್ರಾರಂಭವಾಗದೇ ಇದ್ದಲ್ಲಿ ಸರದಿ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಎಚ್ಚರಿಸಿದರು.
ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ವ್ಯಾಪಾರಸ್ಥರಾದ ಗಂಗಾಧರ ಪಾವಲೆ, ಯುನೂಸಲಿ ಮಕಾನದಾರ, ಭೀಮಾಶಂಕರ ವಾಳಿಖೀಂಡಿ ಇತರರು ಮಾತನಾಡಿ, ಈ ಸತ್ಯಾಗ್ರಹ ಯಾವುದೇ ಪಕ್ಷಕ್ಕಾಗಲಿ, ವ್ಯಕ್ತಿಗಲವಾಗಲಿ ಇಲ್ಲ. ಪಕ್ಷಾತೀತವಾಗಿ ನಡೆದ ಈ ಹೋರಾಟಕ್ಕೆ ಗ್ರಾಮಸ್ಥರ ಬೆಂಬಲ ವ್ಯಕ್ತವಾಗಿದೆ. ಅರ್ಧಕ್ಕೆ ನಿಂತ ಕಾಮಗಾರಿಯಿಂದ ವ್ಯಾಪಾರಸ್ಥರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೂಡಲೇ ಜಿಲ್ಲಾ ಕಾರಿಗಳು ಮಧ್ಯಸ್ಥಿಕೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಪಟ್ಟಣದ ವ್ಯಾಪಾರಸ್ಥರು ಸ್ವ-ಇಚ್ಚೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸಂಜೆ ಧರಣಿ ಸತ್ಯಾಗ್ರಹ ನಡೆದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎನ್.ಬಿ ಗೆಜ್ಜೆ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ನಂತರ ತಹಶೀಲ್ದಾರ್ ಮಾತನಾಡಿ, ತಮ್ಮ ಬೇಡಿಕೆ ಕುರಿತು ಮೇಲಾಧಿ ಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಮುಖಂಡರಾದ ದೇವೇಂದ್ರಪ್ಪ ಪಾಟೀಲ, ಬಸವರಾಜ ಭಮಶೆಟ್ಟಿ, ಮಹಾದೇವ ಬನಸೋಡೆ, ರಾಮ ಮಾಲಾಪೂರ, ಮಲ್ಲು ಉಮರಾಣಿ, ಸಂಜು ಭಂಡರಕವಟೆ ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಪಾಟೀಲ, ಶಕಿಲ ಖಾಟೀಕ, ದೀಪಕ ಕದಂ, ಅಂಬಾದಾಸ ಸಿಂದಗಿ, ಸುನೀಲ ಕ್ಷತ್ರಿ, ಪ್ರವೀಣ ಪಾಟೀಲ, ಚಂದು ಕಲಮನಿ, ಬಸವರಾಜ ಉಮರಾಣಿ, ಸಾಗರ ಜಂಗಮಶೆಟ್ಟಿ, ಪಿಂಟು ಜಂಗಮಶೆಟ್ಟಿ, ಮಲ್ಲನಗೌಡ ಪಾಟೀಲ, ಜಗದೀ ಮುಂಬೈ, ಮಹಾಂತೇಶ ದಾಶ್ಯಾಳ, ಸೇರಿದಂತೆ ವಿವಿಧ ಸಂಘಟನೆಗಳ, ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಇದ್ದರು.