Advertisement

ವಿಶ್ವದ ಸರ್ವಾಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳೇ ನಿರಂತರವಾಗಿ ಹೋರಾಟ ನಡೆಸಿದ್ದಾರೆ

07:03 PM Jul 25, 2022 | Team Udayavani |

ಗಂಗಾವತಿ: ವಿಶ್ವದಲ್ಲಿ ಇತಿಹಾಸವನ್ನು ಗಮನಿಸಿದರೆ ಸರ್ವಾಧಿಕಾರಿಗಳ ಧೋರಣೆಗಳ ವಿರುದ್ಧ  ಮುಂಚೂಣಿಯಲ್ಲಿ ನಿಂತು ವಿದ್ಯಾರ್ಥಿಗಳ ಸಂಘಟನೆಗಳೇ ಹೋರಾಟ ನಡೆಸಿ ನಿರಂಕುಶ ಪ್ರಭುತ್ವಗಳನ್ನು ಕೊನೆಗಾಣಿಸಿವೆ. ಭಾರತದಲ್ಲಿ ಪ್ರಸ್ತುತ ಜನ ವಿರೋಧಿ ಪ್ಯಾಸಿಸ್ಟ್ ಸರಕಾರದ ವಿರುದ್ಧ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಯುವ ಸಮೂಹ  ಹೋರಾಟ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷ ಹತಾವುಲ್ಲಾ ಪುಂಜಲ್ ಕಟ್ಟೆ ಹೇಳಿದರು.

Advertisement

ಅವರು ಕರ್ನೂಲ್ ಬಾಬಾ ದರ್ಗಾ ಆವರಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯತ್ವ ಅಭಿಯಾನ  ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶದ ಇತಿಹಾಸವನ್ನು ಗಮನಿಸಿದರೆ ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧವೂ ವಿದ್ಯಾರ್ಥಿ ಮತ್ತು ಯುವ ಸಮೂಹ ಹೋರಾಟ ನಡೆಸಿ ಯಶಸ್ವಿಯಾಗಿದೆ. 2014 ರಿಂದ  ಸಂವಿಧಾನ ಆಶಯಗಳಿಗೆ ಮಾರಕವಾಗುವಂತಹ ಆಡಳಿತ ಜಾರಿಯಲ್ಲಿದ್ದು ಪ್ರಜಾಪ್ರಭುತ್ವ ಸಂವಿಧಾನ ಬದ್ಧವಾಗಿ ಜನಪರ  ಹೋರಾಟ ನಡೆಸುವವರನ್ನು ಜೈಲಿನಲ್ಲಿರಿಸಲಾಗಿದೆ. ಸಂವಿಧಾನದ ಆಶಯಗಳನ್ನು ಉಳಿಸಲು ದೇಶದ ಸಮಗ್ರತೆ ಉಳಿವಿಗಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ವಿದ್ಯಾರ್ಥಿ ಸಂಘಟನೆಯ ಮೂಲಕ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಂಘಟನೆಯ ರಾಜ್ಯ ಮುಖಂಡ ಸರ್ಫರಾಜ್ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ಶೈಕ್ಷಣಿಕವಾಗಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇತ್ತೀಚೆಗೆ ಪಿಎಸ್‌ಐ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆದಿದೆ. ಬರೀ ಅಧಿಕಾರಿಗಳು ಬಂಧನವಾಗಿದ್ದು ಇದರಲ್ಲಿ ಪಾಲ್ಗೊಂಡಿರುವ ಜನಪ್ರತಿನಿಧಿಗಳನ್ನು ಬಂಧಿಸಬೇಕು. ಉತ್ತರ ಕರ್ನಾಟಕ ಸೇರಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಇದುವರೆಗೂ ಆಡಳಿತ ನಡೆಸಿದ ಸರಕಾರಗಳು ಅನ್ಯಾಯ ಮಾಡಿವೆ. ಹೆಸರಿಗೆ ಮಾತ್ರ ಕಲಂ 371(ಜೆ) ಕೊಟ್ಟಿದ್ದು ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಎಲ್ಲಾ ಸಮಸ್ಯೆಗಳ ಕುರಿತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ ಎಂದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರಾಜ್ಯ ಮುಖಂಡರಾದ ಅನೀಸ್ ಕುಂಬ್ರಾ, ಸರ್ಫರಾಜ್, ಚಾಂದ ಸಲ್ಮಾನ್, ನಾಸೀರಾ, ಅತೀಕುರ್ ರಹೆಮಾನ್ ಸೇರಿ ಅನೇಕರಿದ್ದರು.

Advertisement

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ 2022-23 ರ ಸದಸ್ಯತ್ವ ಅಭಿಯಾನದ ನಿಮಿತ್ತ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ರ‍್ಯಾಲಿ ನಡೆಸುವ ಸಂದರ್ಭದಲ್ಲಿ  ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ವಿವಿಧ ಭ್ರಷ್ಠಾಚಾರ ನಡೆದಿರುವುದು ಹಾಗೂ ಪಿಎಸ್‌ಐ ಹಗರಣ ಮತ್ತು ಸಂವಿಧಾನ ಪ್ರಜಾಪ್ರಭುತ್ವ ಉಳಿಸಿ ಎಂದು ಬರೆಯಲಾಗಿದ್ದ ಪ್ಲೇ ಕಾರ್ಡ್ ಪ್ರದರ್ಶನಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿದಾಗ ಸಂಘಟಕರು ಮತ್ತು ಪಿಐ ಟಿ.ವೆಂಕಟಸ್ವಾಮಿ ಮಧ್ಯೆ ವಾಗ್ವಾದ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next