Advertisement

ಸಿಇಟಿ ಫ‌ಲಿತಾಂಶ ಪ್ರಕಟವಾದ ಅನಂತರವೂ ರ್‍ಯಾಂಕ್‌ ತಗಾದೆ…ಗೊಂದಲ ಏನು?

09:19 AM Aug 04, 2022 | Team Udayavani |

ಉಡುಪಿ : ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‌ ಪ್ರವೇಶಕ್ಕೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫ‌ಲಿತಾಂಶ ಪ್ರಕಟನೆಯ ಅನಂತರವೂ ರ್‍ಯಾಂಕ್‌ ವಿಚಾರವಾಗಿ ಸಾವಿರಾರು ವಿದ್ಯಾರ್ಥಿಗಳು ತಗಾದೆ ಎತ್ತಿದ್ದರು.

Advertisement

ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಈ ಸಂಬಂಧ ಮಂಗಳವಾರ ಇಲಾಖೆ ಮತ್ತು ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಸಿಇಟಿ ರ್‍ಯಾಂಕ್‌ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದರು.

ಗೊಂದಲ ಏನು?
ಹೊಸ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಜತೆಗೆ ಸಿಇಟಿಯನ್ನು ಬರೆದಿದ್ದಾರೆ. ಆದರೆ ಪುನರಾವರ್ತಿತ ಅಭ್ಯರ್ಥಿಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇರಲಿಲ್ಲ. ಆ ವರ್ಷ ಎಲ್ಲರನ್ನೂ ತೇರ್ಗಡೆ ಮಾಡಲಾಗಿತ್ತು. ಅಲ್ಲದೆ ಆ ವರ್ಷಕ್ಕೆ ಸೀಮಿತವಾಗಿ ವೃತ್ತಿಪರ ಕೋರ್ಸ್‌ ಗಳ ಸೀಟು ಹಂಚಿಕೆಗೆ ಸಿಇಟಿ ರ್‍ಯಾಂಕ್‌ ಮಾತ್ರ ಪರಿಗಣಿಸಲಾಗುತ್ತದೆ. ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಾಧಿ ಕಾರ ಸ್ಪಷ್ಟಪಡಿಸಿತ್ತು. ಕಳೆದ ವರ್ಷ ಪರೀಕ್ಷೆ ಎದುರಿಸಿದ ಹಲವು ವಿದ್ಯಾರ್ಥಿಗಳು ರ್‍ಯಾಂಕ್‌ ಆಧಾರದಲ್ಲಿ ಕಾಲೇಜಿಗೆ ದಾಖಲಾಗಿರಲಿಲ್ಲ. ಈ ವರ್ಷ ಪುನರ್‌ ಪರೀಕ್ಷೆ ಬರೆದಿದ್ದು, ಪ್ರಸಕ್ತ ಸಾಲಿನ ನಿಯಮದಂತೆ ನಮ್ಮ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಫ‌ಲಿತಾಂಶ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದು, 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಕಠಿನ ಮಾರ್ಗಸೂಚಿಯಂತೆ ನಡೆದಿದೆ. ಆದರೆ 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿಲ್ಲ. ಹೀಗಾಗಿ ಈ ಎರಡು ಸಾಲಿನ ವಿದ್ಯಾರ್ಥಿಗಳನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಅಲ್ಲದೆ 2021ರ ಸಿಇಟಿ ಫ‌ಲಿತಾಂಶದಲ್ಲಿ ಯಾವುದೇ ಕಟ್‌ ಆಫ್ ಇಲ್ಲದೆ ಎಲ್ಲರಿಗೂ ರ್‍ಯಾಂಕ್‌ ನೀಡಲಾಗಿತ್ತು. ರ್‍ಯಾಂಕ್‌ ಆಧಾರದಲ್ಲೇ ಸೀಟು ಹಂಚಿಕೆ ಮಾಡಲಾಗಿತ್ತು. ಈ ವರ್ಷ ಕೊರೊನಾ ಬರುವ ಮೊದಲಿದ್ದ ನಿಯಮ ಮುಂದುವರಿಸಲಾಗಿದೆ. ಹೀಗಾಗಿ 2020-21ನೇ ಸಾಲಿನ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕ ಪರಿಗಣಿಸಿದಲ್ಲಿ ಹೊಸ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಪುನರಾವರ್ತಿತ ಅಭ್ಯರ್ಥಿಗಳಿಗೆ ಸಿಇಟಿ ರ್‍ಯಾಂಕ್‌ ಆಧಾರದಲ್ಲಿ ಕಳೆದ ವರ್ಷದಂತೆ ಸೀಟು ಹಂಚಿಕೆ ಇರಲಿದೆ. ಹೊಸ ಅಭ್ಯರ್ಥಿಗಳಿಗೆ ಸಿಇಟಿ ರ್‍ಯಾಂಕ್‌ ಜತೆಗೆ ದ್ವಿತೀಯ ಪಿಯುಸಿ ಅಂಕವನ್ನೂ ಪರಿಗಣಿಸಲಾಗುತ್ತದೆ. ಸುಮಾರು 24 ಸಾವಿರ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಅವರ ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸಿದಲ್ಲಿ 1.50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹೊಸ ಅಭ್ಯರ್ಥಿ ಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಎಲ್ಲ ಆಯಾಮ ಗಳಲ್ಲೂ ಚರ್ಚೆ ನಡೆಸಿ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಕಳೆದ 4 ವರ್ಷಗಳ ಮಾಹಿತಿ
2019ರಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆ ಬರೆದ 1.80 ಲಕ್ಷ ಮಂದಿಯಲ್ಲಿ 1.40 ಲಕ್ಷ ಮಂದಿಗೆ ರ್‍ಯಾಂಕ್‌ ನೀಡಲಾಗಿತ್ತು. 2020ರಲ್ಲಿ 1.94 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 1.75 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು, 1.55 ಲಕ್ಷ ಮಂದಿಗೆ ರ್‍ಯಾಂಕ್‌ ನೀಡಲಾಗಿತ್ತು. 2021ರಲ್ಲಿ 2.01 ಲಕ್ಷ ಮಂದಿ ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದು, 1.93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಎಲ್ಲರಿಗೂ ರ್‍ಯಾಂಕ್‌ (ಕೊ ರೊನಾ ಹಿನ್ನೆ ಲೆ ಯ ಲ್ಲಿ) ನೀಡಲಾಗಿತ್ತು. 2022ರಲ್ಲಿ 2.16 ಲಕ್ಷ ಮಂದಿ ಪರೀಕ್ಷೆ ಬರೆದಿದ್ದು, 2.10 ಲಕ್ಷ ಮಂದಿಗೆ ರ್‍ಯಾಂಕ್‌ ನೀಡಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next