ಬೆಂಗಳೂರು: ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳ ಸೀಟು ಪಡೆಯಲು ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎದುರಿಸಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಧ್ವನಿಮುದ್ರಿತ ಸಹಾಯವಾಣಿ ವ್ಯವಸ್ಥೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರೂಪಿಸಿದೆ. ಪ್ರತಿವರ್ಷ ಸಿಇಟಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳು ಎದುರಿಸುತ್ತಿದ್ದ ಬಹುಮಖ್ಯ ಸಮಸ್ಯೆಗಳಲ್ಲಿ ಸಹಾಯವಾಣಿ ಕೂಡ ಒಂದಾಗಿತ್ತು. ಕೆಇಎ ನೀಡುತ್ತಿದ್ದ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ ರಿಂಗಣಿಸಿದರೂ ಕರೆ ಸ್ವೀಕರಿಸುವವರು ಇರುತ್ತಿರಲಿಲ್ಲ. ಕರೆ ಸ್ವೀಕರಿಸಿದರೂ ತಾಂತ್ರಿಕ ಸಮಸ್ಯೆಯಿಂದ ಮಾತನಾಡುವುದು ಸರಿಯಾಗಿ ಕೇಳುತ್ತಿರಲಿಲ್ಲ. ಈ ಸಂಬಂಧ ಪ್ರಾಧಿಕಾರಕ್ಕೆ ನೂರಾರು ದೂರುಗಳು ಬಂದಿದ್ದವು.
ಎಲ್ಲ ಸಮಸ್ಯೆಗೂ ಪರಿಹಾರ ನೀಡಿ, ಸಿಇಟಿ ಎದುರಿಸುವ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ಸಹಾಯವಾಣಿ ಮೂಲಕವೇ ಕಲ್ಪಿಸಲು ಪ್ರಾಧಿಕಾರ ನಿರ್ಧರಿಸಿದೆ. ಹೀಗಾಗಿ 2019-20ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಸೀಟು ಪಡೆಯಲು ಸಿಇಟಿ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ವ್ಯವಸ್ಥೆ ಉನ್ನತೀಕರಿಸಲಾಗಿದೆ.
ಬಿಎಸ್‌ಎನ್‌ಎಲ್ ಸಹಿತವಾಗಿ ಖಾಸಗಿ ಟೆಲಿಕಾಂ ಸಂಸ್ಥೆಗಳು, ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಸಂಸ್ಥೆಗಳ ಸಹಾಯವಾಣಿ ಮಾದರಿಯಲ್ಲೇ ಧ್ವನಿಮುದ್ರಿತ ಸಂದೇಶವನ್ನು ಅರ್ಹ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಮೂಲಕ ನೀಡಲಾಗುತ್ತಿದೆ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕೆಇಎ ವಿಶೇಷಾಧಿಕಾರಿ ಗಂಗಾಧರಯ್ಯ ಮಾಹಿತಿ ನೀಡಿದರು.
ಜಿಲ್ಲೆಗಳಲ್ಲೇ ಸೀಟು ಹಿಂದಿರುಗಿಸಲು ವ್ಯವಸ್ಥೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರಸಕ್ತ ಸಾಲಿನಿಂದ ದಾಖಲೆ ಪರಿಶೀಲನಾ ಕೇಂದ್ರ ತೆರೆಯಲಾಗುವುದು. ಇಲ್ಲಿಯೇ ವಿದ್ಯಾರ್ಥಿಗಳು ದಾಖಲಾತಿ ಪರಿಶೀಲನೆ ಮಾಡಿಕೊಳ್ಳಬಹುದು. ಹಾಗೆಯೇ ಸೀಟು ಹಂಚಿಕೆಯ ನಂತರ, ಕಾಲೇಜು ಇಷ್ಟವಾಗದೇ ಅಥವಾ ಇನ್ಯಾವುದೋ ಕಾರಣಕ್ಕಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಹಂಚಿಕೆಯಾದ ಸೀಟನ್ನು ಪ್ರಾಧಿಕಾರಕ್ಕೆ ವಾಪಸ್ ನೀಡಲು ಬೆಂಗಳೂರಿಗೆ ಬರಬೇಕೆಂದಿಲ್ಲ.
ಕನ್ನಡದಲ್ಲಿಯೇ ಸಂಪೂರ್ಣ ಸಂದೇಶ
ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 080-23460460ಗೆ ಕರೆ ಮಾಡಿದರೆ, ಸಿಇಟಿ ಕುರಿತು ಸಂಪೂರ್ಣ ಧ್ವನಿಮುದ್ರಿತ ಸಂದೇಶ ಕನ್ನಡದಲ್ಲಿ ಬರುತ್ತದೆ. (ಅಧಿಕಾರಿಗಳಿಂದ ಇಂಗ್ಲಿಷ್‌ನಲ್ಲಿ ಮಾಹಿತಿ ಪಡೆಯಬಹುದು.) ಕರೆ ಕನೆಕ್ಟ್ ಆದ ತಕ್ಷಣವೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸ್ವಾಗತ- ಅರ್ಜಿ ಸಲ್ಲಿಸುವ ದಿನಾಂಕ, ಅರ್ಜಿ ಶುಲ್ಕ, ಪರೀಕ್ಷಾ ದಿನಾಂಕದ ವಿವರ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಸಂಬಂಧಪಟ್ಟ ಅಧಿಕಾರಿ ಜತೆಯೂ ಮಾತಾಡಬಹುದು.
ರಾಜು ಖಾರ್ವಿ ಕೊಡೇರಿ