Advertisement

ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿದೆ ಸಿಇಟಿ…ವಿಡಿಯೋ ಚಿತ್ರೀಕರಣವೇಕೆ?

12:15 PM Jun 15, 2022 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಕಟ್ಟು ನಿಟ್ಟಾಗಿ ನಡೆಸಲು ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದೆ.

Advertisement

ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕಾಗಿ ಜೂ.16ರಿಂದ 18ರ ವರೆಗೆ ಸಿಇಟಿ ನಡೆಯಲಿದೆ. ಸಹಾಯಕ ಪ್ರಾಧ್ಯಾಪಕ ಹಾಗೂ ಪಿಎಸ್‌ಐ ಪರೀಕ್ಷಾ ಅಕ್ರಮದ ಪರಿಣಾಮ ಎಚ್ಚೆತ್ತುಕೊಂಡಿರುವ ಕೆಇಎ, ಭದ್ರತಾ ಕ್ರಮದ ದೃಷ್ಟಿಯಿಂದ ಸಿಇಟಿ ಪರೀಕ್ಷಾ ಕೊಠಡಿಗಳ ಚಿತ್ರೀಕರಣವನ್ನು ಹೆಚ್ಚುವರಿಯಾಗಿ ಕ್ರಮ ಕೈಗೊಳ್ಳುತ್ತಿದೆ.

ವಿಡಿಯೋ ಚಿತ್ರೀಕರಣವೇಕೆ?: ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ವಿಡಿಯೋ ಚಿತ್ರೀಕರಣವು ಅಭ್ಯರ್ಥಿಗಳ ಮುಖಚರ್ಯೆ, ಹಾವ ಭಾವ, ಕೊಠಡಿಯೊಳಗಿನ ಚಟುವಟಿಕೆಗಳು ಸಿಸಿಟಿವಿ ತುಣುಕುಗಳಿಗಿಂತ ವಿಡಿಯೋ ಚಿತ್ರೀಕರಣದಲ್ಲಿ ನಿಖರ ಮತ್ತು ಸ್ಪಷ್ಟತೆ ಇರುತ್ತದೆ. ಪರೀಕ್ಷಾ ಆವರಣದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಲಿದ್ದು, ಅಭ್ಯರ್ಥಿಗಳನ್ನು ಹೊರತುಪಡಿಸಿ ಅನಗತ್ಯ ವಾಗಿ ಸಂಶಯಾಸ್ಪದ ವ್ಯಕ್ತಿ ಗಳು ಅಡ್ಡಾಡಿದರೂ ವಿಡಿಯೋದಲ್ಲಿ ಸೆರೆಯಾಗಲಿದೆ.

ಒಂದು ವೇಳೆ ಪರೀಕ್ಷಾ ಅಕ್ರಮಗಳು ನಡೆದರೆ ಅಥವಾ ನಕಲು ಮಾಡಿದರೆ ಸಂಬಂಧಪಟ್ಟ ಅಭ್ಯರ್ಥಿಯನ್ನು ಪತ್ತೆ ಹಚ್ಚಲು ಮತ್ತು ಸ್ಪಷ್ಟವಾದ ಅಕ್ರಮ ಚಟುವಟಿಕೆ ಗಳನ್ನು ಗುರುತಿಸಲು ಸುಲಭವಾಗಲಿದೆ ಎಂಬುದು ಪ್ರಾಧಿಕಾರದ ಉದ್ದೇಶವಾಗಿದೆ.

ಪರೀಕ್ಷಾ ನಿಯಮ ಪಾಲನೆ ಶಿಸ್ತು: ಅಕ್ರಮ ಪತ್ತೆ ಹಚ್ಚುವುದು ಮಾತ್ರವಲ್ಲ, ವಿಡಿಯೋ ಚಿತ್ರೀಕರಣದಿಂದ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸುವುದನ್ನು ಕೂಡ ತಿಳಿಯಬಹುದಾಗಿದೆ. ಥರ್ಮಲ್‌ ಸ್ಕ್ಯಾನಿಂಗ್‌, ಮಾಸ್ಕ್ ಧರಿಸುವುದು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಒಎಂಆರ್‌ ಶೀಟ್‌ ವಿತರಿಸುವುದು ಮತ್ತು ಕರ್ತವ್ಯ ನಿರ್ವಹಣೆ ಕೂಡ ಸೆರೆಯಾಗುವುದರಿಂದ ಪರೀಕ್ಷಾ ಸಿಬ್ಬಂದಿ ಜಾಗರೂಕತೆಯಿಂದ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ ಎಂಬ ಉದ್ದೇಶ ಹೊಂದಲಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ.

Advertisement

ಸರ್ಜಿಕಲ್‌ ಮಾಸ್ಕ್ ಗೆ ಮಾತ್ರ ಅವಕಾಶ: ನೀಟ್‌ ಪರೀಕ್ಷೆ ಮಾದರಿಯಲ್ಲಿ ಭದ್ರತಾ ಕ್ರಮ ಕೈಗೊಂಡಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ನಿಯಮ ರೂಪಿಸಿದ್ದು, ತುಂಬು ತೋಳಿನ ವಸ್ತ್ರಗಳು, ಕಿವಿ ಮತ್ತು ತಲೆ ಮುಚ್ಚುವಂತಹ ವಸ್ತ್ರಗಳನ್ನು ಪರೀಕ್ಷಾ ಕೊಠಡಿಯಲ್ಲಿ ಧರಿಸಬಾರದು ಎಂಬ ನಿಯಮ ರೂಪಿಸಿದೆ. ಅಭ್ಯರ್ಥಿಗಳಿಗೆ ಅರೆ ಪಾರದರ್ಶಕವಾದ ಸರ್ಜಿಕಲ್‌ ಮಾಸ್ಕ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಎನ್‌-95/ಕಾಟನ್‌ ಮಾಸ್ಕ್ ಗಳಿಗೆ ಅನುಮತಿ ನೀಡಿಲ್ಲ. ಯಾವುದೇ ರೀತಿಯ ಆಭರಣಗಳಿಗೆ ಅನುಮತಿ ಇಲ್ಲ. ಮೊಬೈಲ್‌ ಫೋನ್‌, ಬ್ಲೂಟೂಥ್‌, ವೈರ್‌ಲೆಸ್‌ ಸೆಟ್ಸ್‌, ಕೈ ಗಡಿಯಾರಗಳನ್ನು ಸೇರಿ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪರೀಕ್ಷಾ ಕೊಠಡಿಯೊಳಗೆ ನಿಷೇಧಿಸಿದೆ.

ನಾಳೆಯಿಂದ ಪರೀಕ್ಷೆ
ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜೂ.16ರಿಂದ 18ರ ವರೆಗೆ ನಡೆಯಲಿದೆ. ಜೂ.16ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ, ಅದೇ ದಿನ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. ಜೂ.17ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರ ವರೆಗೆ
ರಸಾಯನಶಾಸ್ತ್ರಗಳು ತಲಾ 60 ಅಂಕಗಳಿಗೆ ನಡೆಯಲಿವೆ.

ಜೂ.18ರಂದು ಬೆಳಗ್ಗೆ 11.30ರಿಂದ 12.30ರ ವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ 1,04,550 ವಿದ್ಯಾರ್ಥಿಗಳು ಹಾಗೂ 1,11,975 ವಿದ್ಯಾರ್ಥಿನಿಯರು ಸೇರಿ 2,16,525 ಮಂದಿ ಸಿಇಟಿ ಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಭದ್ರತಾ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷಾ ಕೊಠಡಿಗಳ ಚಿತ್ರೀಕರಣ ಮಾಡ ಲಾಗುತ್ತಿದೆ. ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
●ಎಸ್‌. ರಮ್ಯಾ,
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

●ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next