ಬೆಂಗಳೂರು: ಜುಲೈ 2ನೇ ವಾರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಸೀಟು ಹಂಚಿಕೆಯ ಕೌನ್ಸೆಲಿಂಗ್ ನಡೆಯಲಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆ ತಡವಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಗುರುವಾರ ‘ಉದಯವಾಣಿ’ ಜತೆ ಮಾಹಿತಿ ಹಂಚಿಕೊಂಡ ಅವರು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಪ್ರವೇಶ ಪರೀಕ್ಷೆ ಆಗಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬಗ್ಗೆ ಗೊಂದಲಗಳಿದ್ದರೂ ಅದರ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಜುಲೈ 6ರಿಂದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ನೋಂದಣಿ ಮತ್ತು ರೌಂಡ್ ಒಂದಕ್ಕೆ ಚಾಯ್ಸ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಒಮ್ಮೆ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಂಡರೆ ಅದಾದ ಒಂದು ವಾರದಲ್ಲಿ ರಾಜ್ಯದಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಯಲಿದೆ ಎಂದರು.
ನೀಟ್ ಪರೀಕ್ಷೆಯ ಅಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯಕ್ಕೆ ನೀಟ್ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿಲ್ಲ. ಆದ್ದರಿಂದ ಮುಂದಿನ ವಾರ ಸಿಇಟಿ ಕೌನ್ಸೆಲಿಂಗ್‌ನ ವೇಳಾಪಟ್ಟಿ ಪ್ರಕಟಿಸಿ ಜುಲೈ 6ರ ಬಳಿಕ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ಪ್ರಸನ್ನ ತಿಳಿಸಿದರು.
10 ಸಾವಿರ ಎಂಜಿನಿಯರಿಂಗ್ ಸೀಟ್ ಹೆಚ್ಚಳ!:
ಕಳೆದ ವರ್ಷ ರಾಜ್ಯದಲ್ಲಿ 1,24,551 ಎಂಜಿನಿಯರಿಂಗ್ ಸೀಟ್‌ಗಳಿದ್ದವು. ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಈ ವರ್ಷ ರಾಜ್ಯದಲ್ಲಿ ಒಟ್ಟು 1,32,308 ಸೀಟುಗಳಿಗೆ ಅನುಮೋದನೆ ನೀಡಿದೆ. ಕಳೆದ ವರ್ಷ 54 ಸಾವಿರ ಸರಕಾರಿ ಕೋಟಾದ ಸೀಟ್ ಕೊಟ್ಟಿದ್ದರೆ, ಈ ಬಾರಿ 62,930 ಸೀಟ್ ನಿಗದಿಯಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ 10 ಸಾವಿರ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಹೆಚ್ಚಳವಾಗಿವೆ ಎಂದು ಪ್ರಸನ್ನ ತಿಳಿಸಿದ್ದಾರೆ.