Advertisement

ಸಿಇಟಿ ಗೊಂದಲ: ವ್ಯವಸ್ಥೆಯ ದುಃಸ್ಥಿತಿಗೆ ವಿದ್ಯಾರ್ಥಿಗಳು ಬಲಿಯಾಗದಿರಲಿ

12:01 AM Sep 20, 2022 | Team Udayavani |

ಕೊರೊನಾ ಸಾಂಕ್ರಾಮಿಕ ನಮ್ಮಿಂದ ದೂರವಾಗುತ್ತಿದ್ದರೂ ನಮ್ಮ ವ್ಯವಸ್ಥೆಗೆ ಹಿಡಿದ ತುಕ್ಕು ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಈ ವರ್ಷ ಸಿಇಟಿ ಬರೆದ ವಿದ್ಯಾರ್ಥಿಗಳ ಬವಣೆ. ಇದೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಅಂದರೆ 24,000 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಆದರೆ ರ್‍ಯಾಂಕ್‌ ಪಟ್ಟಿ ಪ್ರಕಟಿಸುವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಈ ವಿದ್ಯಾರ್ಥಿಗಳ ಹಿಂದಿನ ವರ್ಷದ ಪರೀಕ್ಷಾ ಅಂಕ ಪರಿಗಣಿಸಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಪುನರಾವರ್ತಿತ ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿ, ಈ ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕಗಳನ್ನು ಸೇರಿಸಿ ಹೊಸದಾಗಿ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡು ವಂತೆ ಆದೇಶಿಸಿದೆ. ತೀರ್ಪು ಹೊರ ಬೀಳು ತ್ತಿದ್ದಂತೆಯೇ ದಿಢೀರನೆ ಎಚ್ಚೆತ್ತು ಕೊಂಡ ಸರಕಾರ ಮತ್ತು ಕೆಇಐ ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಈಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿ  ಸಿದೆ. ಇದರಿಂದ ಸಿಇಟಿ ಬರೆದ ವಿದ್ಯಾರ್ಥಿಗಳು ಮತ್ತೆ ಅತಂತ್ರರಾಗುವಂತಾಗಿದೆ.

Advertisement

ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಬವಣೆ ಅನುಭವಿ ಸುವಂತಾಗಿದ್ದರೆ ಇದೀಗ ಆಡಳಿತಗಾರರ ದೂರ ದೃಷ್ಟಿಯ ಕೊರತೆ, ಬೇಜವಾಬ್ದಾರಿ ತನ ದಿಂದಾಗಿ ಮತ್ತೆ ವಿದ್ಯಾರ್ಥಿಗಳು ಸಂಕಷ್ಟ ಅನು ಭವಿ ಸುವಂತಾಗಿದೆ. ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಳ್ಳುವಾಗಲೇ ಪುನ ರಾವರ್ತಿತ ವಿದ್ಯಾರ್ಥಿಗಳು ಎಂದು ಅರ್ಜಿಯಲ್ಲಿ ನಮೂದಿ ಸುತ್ತಿರುತ್ತಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕೆಇಎ ನಿರ್ದೇಶಕರು ಹೈಕೋರ್ಟ್‌ ತೀರ್ಪು ಬಂದ ಬಳಿಕ ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿಕೆ ನೀಡಿರುವುದು ಬೇಜವಾಬ್ದಾರಿತನದ ಪರಾಕಾಷ್ಠೆ ಅಲ್ಲದೆ ಇನ್ನೇನು?. ಈ ವಿದ್ಯಾರ್ಥಿಗಳಿಗೆ ಆರಂಭದಲ್ಲಿಯೇ ಹಿಂದಿನ ವರ್ಷದ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೆ ಈ ಗೊಂದಲಗಳು ಎದುರಾಗುತ್ತಿರಲಿಲ್ಲ.

ಇನ್ನು ಈಗಾಗಲೇ ಖಾಸಗಿ ಕಾಲೇಜುಗಳು ತಮ್ಮ ತಮ್ಮ ಕೋಟಾವನ್ನು ಭರ್ತಿ ಮಾಡಿಕೊಂಡಿದ್ದರೆ ಬೇಡಿಕೆಯ ವಿಷಯಗಳಿಗೆ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕಕ್ಕಾಗಿ ಬಲವಂತಪಡಿಸುತ್ತಿವೆ. ಅಲ್ಲದೆ ಈ ಕಾಲೇಜುಗಳಲ್ಲಿ ಈಗಾಗಲೇ ತರಗತಿಗಳೂ ಆರಂಭವಾಗಿವೆ. ಹಾಗಾದರೆ ಸಿಇಟಿ ಬರೆದ ಮಕ್ಕಳ ಭವಿಷ್ಯವೇನು? ಒಂದು ವೇಳೆ ಕೆಇಎ ಹೊಸದಾಗಿ ರ್‍ಯಾಂಕ್‌ ಪಟ್ಟಿ ಪ್ರಕಟಿಸಿದ್ದೇ ಆದಲ್ಲಿ ಕೆಳಗಿನ ರ್‍ಯಾಂಕ್‌ ಪಡೆಯುವ ವಿದ್ಯಾರ್ಥಿಗಳು ಮತ್ತೆ ಸೀಟುಗಳಿಗಾಗಿ ಅಲೆದಾಟ ನಡೆಸಬೇಕಾ ಗುವುದಿಲ್ಲವೇ? ಇದರಿಂದ ವಿದ್ಯಾರ್ಥಿಗಳು ಮತ್ತವರ ಹೆತ್ತವರು ಅನುಭವಿಸುವ ಸಂಕಟ ಸರಕಾರಕ್ಕೆ ಅರ್ಥವಾಗುವುದೇ?

ಸರಕಾರ ಒಂದಿಷ್ಟು ಪೂರ್ವಚಿಂತನೆ ನಡೆಸಿ ಸಿಇಟಿ ಪ್ರಕ್ರಿಯೆಯನ್ನು ನಡೆಸಿದ್ದಲ್ಲಿ ಈ ಎಲ್ಲ ಗೊಂದಲ ವನ್ನು ನಿವಾರಿಸಬಹುದಾಗಿತ್ತು. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಕಾಲಹರಣ ಮಾಡದೆ ಮಾತು ಕತೆ ಮೂಲಕ ಸಮಸ್ಯೆ ಪರಿಹರಿಸಿ ವಿದ್ಯಾ ರ್ಥಿಗಳ ನೋವಿಗೆ ಸ್ಪಂದಿಸಬೇಕು. ವ್ಯವಸ್ಥೆಯ ದುಃಸ್ಥಿತಿಗೆ ವಿದ್ಯಾರ್ಥಿಗಳು ಬಲಿಯಾಗದಿರಲಿ.

-ಪ್ರಕಾಶ್‌ ಭಟ್‌ ಮೊಟ್ಟೆತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next