ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಂಡಿದೆ. ಈ ಬಾರಿ ವಿದ್ಯಾರ್ಥಿಗಳಿಗೆ “ಬೆಲ್’ ಮೂಲಕ ಸೂಚನೆ ನೀಡಲಾಗುತ್ತದೆ.
ಎ.29ರಂದು ಜೀವಶಾಸ್ತ್ರ, ಗಣಿತ ಮತ್ತು ಎ.30ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಸಿಇಟಿ ಬರೆಯಲು 1.94 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಸಿಇಟಿ ಪರೀಕ್ಷೆಯ ಅವಧಿಯಲ್ಲಿ ಒಟ್ಟು ಏಳು ಬೆಲ್ ಹೊಡೆಯ ಲಾಗುತ್ತದೆ. ಮೊದಲ ಬೆಲ್ 10.20ಕ್ಕೆ ಆಗಲಿದ್ದು, ಅಭ್ಯರ್ಥಿಗಳು ಗುರುತಿನ ಚೀಟಿ ಮತ್ತು ಪ್ರವೇಶ ಪತ್ರ ತೋರಿಸಿ ಕೊಠಡಿ ಒಳಗೆ ಪ್ರವೇಶಿಸಿ ನಿರ್ದಿಷ್ಟ ಜಾಗದಲ್ಲಿ ಕುಳಿತುಕೊಳ್ಳಬೇಕು. ಆಗ ಮೇಲ್ವಿಚಾರಕರು ತಪಾಸಣೆ ನಡೆಸು ತ್ತಾರೆ. 10.30ಕ್ಕೆ ಎರಡನೇ ಬೆಲ್ ಕೇಳಿಸ ಲಿದ್ದು ಆಗ ಪ್ರಶ್ನೆ ಪತ್ರಿಕೆ ಹಂಚಿಕೆ ಆರಂಭವಾಗುತ್ತದೆ. ಮೂರನೇ ಬೆಲ್ 10.40ಕ್ಕೆ ಆಗಲಿದ್ದು ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್‌ನಲ್ಲಿ ಪರೀಕ್ಷೆ ಬರೆ ಯಲು ಅವಕಾಶ ಮಾಡಿಕೊಡಲಾಗುತ್ತದೆ. 11.10ಕ್ಕೆ ನಾಲ್ಕನೇ ಬೆಲ್ ಪರೀಕ್ಷೆ ಆರಂಭವಾಗಿ ಅರ್ಧಗಂಟೆಯಾಗಿದೆ ಎಂಬ ಸಂದೇಶ ನೀಡಲಿದೆ. ಐದನೇ ಬೆಲ್ 11.30ಕ್ಕೆ ಆಗಲಿದ್ದು, ಪರೀಕ್ಷೆ ಬರೆಯಲು ಇನ್ನು ಇಪ್ಪತ್ತು ನಿಮಿಷ ಮಾತ್ರ ಇದೆ ಎಂಬ ಎಚ್ಚರಿಕೆ ನೀಡಲಿದೆ. 6ನೇ ಬೆಲ್ 11.45ಕ್ಕೆ ಆಗಲಿದ್ದು, ಪರೀಕ್ಷಾವಧಿ ಪೂರ್ಣಗಳ್ಳಲು ಐದು ನಿಮಿಷ ಇದೆ ಎಂಬು ದನ್ನು ಸೂಚಿಸುತ್ತದೆ. ಕೊನೆಯ ಬೆಲ್ 11.50ಕ್ಕೆ ಆಗಲಿದ್ದು, ಪರೀಕ್ಷೆ ಮುಗಿದಿದ್ದು, ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕ ರಿಗೆ ಒಪ್ಪಿಸಬೇಕಾಗುತ್ತದೆ. ಅಪರಾಹ್ನದ ಅವಧಿಯ ಪರೀಕ್ಷೆಯ ಏಳು ಬೆಲ್‌ಗಳು ಕ್ರಮವಾಗಿ 2.20, 2.30, 2.40, 3.10,3.30, 3.45 ಮತ್ತು 3.50ಕ್ಕೆ ಆಗಲಿದೆ.
ಪ್ರವೇಶ ಪತ್ರದ ಜತೆಗೆ ಭಾವಚಿತ್ರವುಳ್ಳ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದು ಕೊಂಡು ಹೋಗಬೇಕು ಎಂದು ಪ್ರಕಟನೆ ತಿಳಿಸಿದೆ.