ಚಾಮರಾಜನಗರ: ತಾಲೂಕಿನ ಹೊನ್ನಹಳ್ಳಿ ಹಾಗೂ ಅರಕಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಭೇಟಿ ನೀಡಿ ಪರಿಶೀಲಿಸಿದರು.
ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಡ್ಗಲ್‌ಪುರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಂಗು ಸಸಿ ನೆಡುವ ಕಾಮಗಾರಿ ವೀಕ್ಷಿಸಿದರು.
ನಂತರ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಹಂತ-2ರಡಿ ಆಯ್ಕೆಯಾಗಿರುವ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಜಲ ಜೀವನ್ ಮಿಷನ್, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು ಸ್ವತ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳಡಿ ಪ್ರಗತಿ ಸಾಧಿಸಿರುವ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿದರು.
ಅರಕಲವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಹೊರ ರೋಗಿಗಳ ವಿಭಾಗ, ಹೆರಿಗೆ ಕೊಠಡಿ ಮತ್ತು ಪುರುಷರ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಔಷಧ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಅವಧಿ ಮುಗಿದಿರುವ ಔಷಧಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಇರುವ ಸ್ಥಳದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಬಳಿಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸುತ್ತಿ ರುವ ನಳ ಸಂಪರ್ಕ ಕಾಮಗಾರಿ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜ ನೆಯಡಿ ಅನುಷ್ಠಾನಗೊಳಿಸಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸ್ನಾನಗೃಹ ಮತ್ತು ಶೌಚಾಲಯ, ವಿದ್ಯಾರ್ಥಿಗಳ ಕೊಠಡಿ, ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾ ರ್ಥಿಗಳ ಕೊಠಡಿಯಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಇಲ್ಲದೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಟ್ಯೂಬ್‌ಲೈಟ್‌ಗಳನ್ನು ಅಳವಡಿಸುವಂತೆ ಹಾಗೂ ವಾಷಿಂಗ್ ಮಿಷನ್ ಯಂತ್ರವನ್ನು ಚಾಲ್ತಿಯಲ್ಲಿಡಲು ಕ್ರಮವಹಿಸುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಭೇಟಿ ನೀಡಿ, ಗ್ರಂಥಾಲಯದಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸುವಂತೆ, ಕೊಠಡಿಯ ನೆಲಕ್ಕೆ ವೆಟ್ರಿಫೈಡ್ ಟೈಲ್ಸ್ ಗಳನ್ನು ಹಾಕಲು ಹಾಗೂ ಹೆಚ್ಚಿನ ಬೆಳಕಿನ ವ್ಯವಸ್ಥೆಗೆ ಟ್ಯೂಬ್‌ಲೈಟ್‌ಗಳನ್ನು ಅಳವಡಿಸುವಂತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಾಗುವಂತಹ ಪುಸ್ತಕಗಳನ್ನು ಖರೀದಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಷರೀಫ್, ಇತರರು ಇದ್ದರು.