ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಶೇಣಿ ರಂಗ ಜಂಗಮ ಟ್ರಸ್ಟ್ ಮತ್ತು ಯಕ್ಷ ಸ್ನೇಹಿ ಬಳಗ ಪೆರ್ಲ ಇದರ ಸಹಯೋಗದಲ್ಲಿ 7ನೇ ಶೇಣಿ ಶತಕ ಸರಣಿಯಾಗಿ ಆರು ದಿನಗಳ ಯಕ್ಷ ಕೂಟ ಜರಗಿತು.
ಮಕ್ಕಳಿಗೆ ಯಕ್ಷಗಾನದಲ್ಲಿ ಅಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಥಮ ದಿನದಂದು ಮಕ್ಕಳಿಂದ ಯಕ್ಷಗಾನ ವೈಭವ ಜರಗಿಸಲಾಯಿತು. ಸಮೃದ್ಧ ಪುಣಿಂಚಿತ್ತಾಯ ಪೆರ್ಲ, ಮನೋಹರ ಬಲ್ಲಾಳ್ ಅಡ್ವಳ, ಕುಮಾರಿ ವಾಣಿಶ್ರೀ ಬಜಕೂಡ್ಲು ಮತ್ತು ಕುಮಾರಿ ಶ್ರೀರತ್ನಮಾಲಾ ಎಸ್. ವಿ. ಗಾನ ವೈಭವ ನಡೆಸಿಕೊಟ್ಟರು.
ಎರಡನೆಯ ದಿನದಂದು ಬೇಂದ್ರೋಡು ಗೋವಿಂದ ಭಟ್ ಬಳಗದವರಿಂದ ಮಾಗಧ ವಧೆ ಯಕ್ಷಗಾನ ಕೂಟ ಜರಗಿತು. ಭಾಗವತರಾಗಿ ಬೇಂದ್ರೋಡು ಗೋವಿಂದ ಭಟ್, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ್ ಭಟ್, ಮದ್ದಳೆಯಲ್ಲಿ ರಾಘವ ಬಲ್ಲಾಳ್ ಸಹಕರಿಸಿದ್ದರು. ಕೃಷ್ಣನಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲ್, ಭೀಮನಾಗಿ ಮಜಲು ಉದಯಶಂಕರ್ ಭಟ್, ಅರ್ಜುನನಾಗಿ ಬೇಸೀ ಗೋಪಾಕೃಷ್ಣ ಭಟ್ ಮತ್ತು ಮಾಗಧನಾಗಿ ಪಕಳಕುಂಜ ಶ್ಯಾಮ ಭಟ್ ಭಾಗವಹಿಸಿದರು.
3 ನೇ ದಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇವರಿಂದ ಜಾಂಬವತಿ ಕಲ್ಯಾಣ ಪ್ರಸಂಗ. ಭಾಗವತರಾಗಿ ಜಿ. ಕೆ. ನಾವಡ, ಮದ್ದಳೆಯಲ್ಲಿ ವಿಶ್ವೇಶ್ವರ ಭಟ್ ಮತ್ತು ಚೆಂಡೆಯಲ್ಲಿ ದಿವಾಣ ಶಂಕರ ಭಟ್ ಸಹಕರಿಸಿದ್ದರು. ಶ್ರೀಕೃಷ್ಣನಾಗಿ ಪ್ರಶಾಂತ ಬೆಳ್ಳೂರು, ನಾರದನಾಗಿ ಸುಜಾತ ತಂತ್ರಿ ಕಾಸರಗೋಡು, ಬಲರಾಮನಾಗಿ ವೇಣುಗೋಪಾಲ ಶೇಣಿ, ಜಾಂಬವಂತನಾಗಿ ಪಕಳಕುಂಜ ಶ್ಯಾಮ್ ಭಟ್ ಕಾಣಿಸಿಕೊಂಡರು.
ಧೀ ಶಕ್ತಿ ಮಹಿಳಾ ಯಕ್ಷಗಾನ ಬಳಗ ಪುತ್ತೂರು 4ನೇ ದಿನದ ತಾಳಮದ್ದಳೆ ಸಮರ ಸೌಂಗಂಧಿಕ ಪ್ರಸಂಗದ ಕೂಟವನ್ನು ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಸತೀಶ ಪುಣಿಂಚಿತ್ತಾಯ ಪೆರ್ಲ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಶಗ್ರಿತ್ತಾಯ ಮತ್ತು ಮದ್ದಳೆಯಲ್ಲಿ ಶ್ರೀಧರ ಎಡಮಲೆ ಸಹಕರಿಸಿದರು. ಭೀಮನಾಗಿ ಪದ್ಮಾ ಕೆ. ಆಚಾರ್, ದ್ರೌಪದಿಯಾಗಿ ವೀಣಾ ಸರಸ್ವತಿ ನಿಡ್ವಣ್ಣಾಯ, ಕುಬೇರನಾಗಿ ಜಯಲಕ್ಷ್ಮಿವಿ. ಭಟ್, ಹನುಮಂತನಾಗಿ ವೀಣಾ ನಾಗೇಶ ತಂತ್ರಿ ಪಾತ್ರ ನಿರ್ವಹಿಸಿದರು.
5ನೇ ದಿನ ನಡೆದ ಕರ್ಣಬೇಧನ ತಾಳಮದ್ದಳೆ ಕೂಟವನ್ನು ಶ್ರೀ ವಿಷ್ಣುಮೂರ್ತಿ ಮಹಿಳಾ ಯಕ್ಷಗಾನ ಸಂಘದವರು ನಡೆಸಿಕೊಟ್ಟರು. ಭಾಗವತರಾಗಿ ವಾಸುದೇವ ಕಲ್ಲೂರಯ ಮಧೂರು, ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಚೆಂಡೆಯಲ್ಲಿ ಗೋಪಾಕೃಷ್ಣ ಅಡಿಗೆ ಸಹಕರಿಸಿದರು. ಮುಮ್ಮೇಳದಲ್ಲಿ ಕೃಷ್ಣನಾಗಿ ಸಂಧ್ಯಾ ಮುರಳಿ ಮಧೂರು, ಕರ್ಣನಾಗಿ ಸುಜಾತ ತಂತ್ರಿ ಕಾವುಮಠ, ಸೂರ್ಯನಾಗಿ ಸುಧಾ ಕಲ್ಲೂರಾಯ ಮಧೂರು, ಗಂಗೆಯಾಗಿ ಪ್ರಸನ್ನ ಕೆದಿಲಾಯ ಇರುವೈಲು, ಕುಂತಿಯಾಗಿ ಸರಸ್ವತಿ ಅಡಿಗ ಕೂಡ್ಲು ಕಾಣಿಸಿಕೊಂಡರು.
ಕೊನೆಯ ದಿನ ನಡೆದ ಉತ್ತರ ಕುಮಾರನ ಪೌರುಷ ಪ್ರಸಂಗದ ಭಾಗವತರಾಗಿ ಸತೀಶ ಪುಣಿಂಚಿತ್ತಾಯ ಪೆರ್ಲ, ಅವಿನಾಶ್ ಶಾಸ್ತ್ರಿ ಕೊಲ್ಲೆಂಗಾನ , ಚೆಂಡೆ ಮದ್ದಳೆಯಲ್ಲಿ ಶ್ರೀಧರ ಎಡಮಲೆ, ಅನೂಪ್ ಸ್ವರ್ಗ ಮತ್ತು ನಾರಾಯಣ ಶವ ಸಹಕರಿಸಿದರು. ಉತ್ತರನಾಗಿ ಶಂಭು ಶವ ವಿಟ್ಲ , ಬ್ರಹನ್ನಳೆಯಾಗಿ ಮೂಲಡ್ಕ ನಾರಾಯಣ ಮಣಿಯಾಣಿ, ಗೋಪಾಲಕನಾಗಿ ಶೇಣಿ ವೇಣುಗೋಪಾಲ ಭಟ್ ಮತ್ತು ಉತ್ತರೆಯಾಗಿ ಉದಯಶಂಕರ ಭಟ್ ಅಮೈ ಕಾಣಿಸಿಕೊಂಡರು.
ಶಂಕರ್ ಸಾರಡ್ಕ