ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಹಿರಿಯ ವಕೀಲರ ಹೆಸರುಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದ ಫೈಲ್ ನಲ್ಲಿ, ದೆಹಲಿ ಹೈಕೋರ್ಟ್ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ನ್ಯಾಯಮೂರ್ತಿಯಾಗಿ ಭಡ್ತಿ ನೀಡುವ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.
ಸೌರಭ್ ಕಿರ್ಪಾಲ್ ಎಲ್ ಜಿಬಿಟಿ(ಎಲ್-ಲೆಸ್ಬಿಯನ್, ಜಿ-ಗೇ, ಬಿ-ಬೈಸೆಕ್ಸುವಲ್, ಟಿ-ಟ್ರಾನ್ಸ್ ಜೆಂಡರ್ಸ್) ಸಮುದಾಯಕ್ಕೆ ಸೇರಿದವರಾಗಿದ್ದು, ಇವರು ಸುಪ್ರೀಂಕೋರ್ಟ್ ನ ಮಾಜಿ ಚೀಫ್ ಜಸ್ಟೀಸ್ ಬಿಎನ್ ಕಿರ್ಪಾಲ್ ಅವರ ಪುತ್ರ.
ಕಳೆದ ವರ್ಷ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ನೇತೃತ್ವದ ಕೊಲಿಜಿಯಂ, ಸೌರಭ್ ಕಿರ್ಪಾಲ್ ಅವರ ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿತ್ತು.
Related Articles
2021ರ ನವೆಂಬರ್ 11ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ, ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಅನುಮತಿ ನೀಡಿತ್ತು ಎಂದು ವರದಿ ವಿವರಿಸಿದೆ.
2017ರಲ್ಲಿ ದೆಹಲಿ ಹೈಕೋರ್ಟ್ ಕೊಲಿಜಿಯಂ ಕೂಡಾ ದೆಹಲಿ ಹೈಕೋರ್ಟ್ ನ ಖಾಯಂ ಜಡ್ಜ್ ಆಗಿ ಸೌರಭ್ ಅವರನ್ನು ನೇಮಕ ಮಾಡುವಂತೆ ಅವಿರೋಧವಾಗಿ ಶಿಫಾರಸು ಮಾಡಿತ್ತು. ಕಿರ್ಪಾಲ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಕಳುಹಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅವರ ಹೆಸರನ್ನು ಮರುಪರಿಶೀಲಿಸುವಂತೆ ಫೈಲ್ ಅನ್ನು ವಾಪಸ್ ಕಳುಹಿಸಿದೆ ಎಂದು ವರದಿ ಹೇಳಿದೆ.
ಕಿರ್ಪಾಲ್ ಅವರ ಹೆಸರನ್ನು ಅಂತಿಮಗೊಳಿಸಲು ವಿಳಂಬ ಮಾಡಲು ತಮ್ಮ ಎಲ್ ಜಿಬಿಟಿ ಸಮುದಾಯದ ಕುರಿತ ದೃಷ್ಟಿಕೋನವೇ ಕಾರಣ ಎಂದು ಕಿರ್ಪಾಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕಿರ್ಪಾಲ್ ಹೆಸರಿಗೆ ಅನುಮತಿ ನೀಡಿದರೆ ಅವರು ಭಾರತದ ಮೊದಲ ಸಲಿಂಗಿ(ಗೇ) ನ್ಯಾಯಾಧೀಶರಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದು, ಇದರಿಂದ ಹಿರಿತನದ ಸೇವಾವಧಿಗೆ ಧಕ್ಕೆಯಾಗಲಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಅಸಮಾಧಾನವ್ಯಕ್ತಪಡಿಸಿತ್ತು.