Advertisement

ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ 50 ಸಾವಿರ ಪರಿಹಾರ

12:24 AM Sep 23, 2021 | Team Udayavani |

ಹೊಸದಿಲ್ಲಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಆಗ್ರಹಕ್ಕೆ ಮಣಿದಿರುವ ಕೇಂದ್ರ ಸರಕಾರ ತಲಾ 50 ಸಾವಿರ ರೂ. ಘೋಷಿಸಿದೆ. ಈ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಲಭಿಸಲಿದೆ ಎಂದು ಹೇಳಿದೆ.

Advertisement

ಈ ಕುರಿತು ಬುಧವಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿರುವ ಕೇಂದ್ರ ಸರಕಾರ, ಈ ಪರಿಹಾರ ಇದುವರೆಗೆ ಮೃತಪಟ್ಟಿರುವವರಿಗಷ್ಟೇ ಅಲ್ಲದೆ ಮುಂದೆ ಸಾವನ್ನಪ್ಪಿದರೆ ಅಂಥವರ ಕಟುಂಬಕ್ಕೂ ಸಿಗಲಿದೆ ಎಂದು ತಿಳಿಸಿದೆ.

ಕಾರ್ಯಾಚರಣೆ ವೇಳೆ ಮೃತಪಟ್ಟರೂ ಪರಿಹಾರ ಲಭ್ಯ:

ಕೊರೊನಾದಿಂದ ಸಾವನ್ನಪ್ಪಿರುವವರ ಜತೆಗೆ, ಸೋಂಕಿನ ನಿಯಂತ್ರಣದಲ್ಲಿ ಭಾಗಿಯಾದವರು ಅಥವಾ ನಿಯಂತ್ರಣಕ್ಕೆ ಸಿದ್ಧತೆ ವೇಳೆ ಸಾವನ್ನಪ್ಪಿರುವವರಿಗೂ ಪರಿಹಾರ ಸಿಗಲಿದೆ. ಕೇಂದ್ರ ಸರಕಾರ ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರವೇ ನೀಡಲಾಗುವುದು ಎಂದು ಹೇಳಿದೆ.

ಮೃತರ ಕುಟುಂಬಗಳು ದಾಖಲೆ, ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಹೀಗೆ ಸಲ್ಲಿಸಿದ ಅರ್ಜಿಯ ಪರಿಶೀಲನೆ, ಒಪ್ಪಿಗೆ ಮತ್ತು ವಿತರಣೆಯ ಕೆಲಸವನ್ನು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರಗಳು ನಡೆಸಲಿವೆ.

Advertisement

ಆಧಾರ್‌ ಸಂಪರ್ಕಿಸಲಾಗುತ್ತಿದ್ದು,  ನೇರವಾಗಿ ಕುಟುಂಬ ಸದಸ್ಯರ ಬ್ಯಾಂಕ್‌ ಖಾತೆಗೇ ಹಣ ಹೋಗಲಿದೆ. ಈ ಬಗ್ಗೆ ಏನೇ ಗೊಂದಲ, ಸಮಸ್ಯೆಗಳಿದ್ದರೆ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ  ನೋಡಿಕೊಳ್ಳಲಿದೆ.

ಲಂಡನ್‌: ಪ್ರಮಾಣಪತ್ರಕ್ಕಿಲ್ಲ  ಒಪ್ಪಿಗೆ! :

ಹೊಸದಿಲ್ಲಿ /ಲಂಡನ್‌: ಭಾರತ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ನಡುವಿನ ಕ್ವಾರಂಟೈನ್‌ ಬಿಕ್ಕಟ್ಟು ಹೊಸ ಮಜಲು ಪ್ರವೇಶಿಸಿದೆ. ಕೊವಿಶೀಲ್ಡ್‌ಗೆ ಮಾನ್ಯತೆ ಕೊಟ್ಟಿರುವ ಯುಕೆ, ಭಾರತದ ಪ್ರಮಾಣ ಪತ್ರ ಒಪ್ಪಲು ಸಾಧ್ಯವಿಲ್ಲ ಎಂದಿದೆ. ಜತೆಗೆ ಭಾರತೀಯರು ಲಸಿಕೆ ಹಾಕದ ರಾಷ್ಟ್ರಗಳ ಪ್ರಜೆಗಳಿಗೆ ಅನುಸರಿಸಿರುವ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂದಿದೆ. ಭಾರತದ ಆಕ್ಷೇಪಣೆ ಹಿನ್ನೆಲೆಯಲ್ಲಿ ನಿಯಮ ಬದಲಿಸಿರುವ ಯುಕೆ, ಇಡೀ ಬೆಳವಣಿಗೆಯನ್ನು ಮತ್ತಷ್ಟು ಗೋಜಲಾಗಿಸಿದೆ. ಯುಕೆ ಸರಕಾರದ ವಾದವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್‌. ಶರ್ಮಾ ತಿರಸ್ಕರಿಸಿದ್ದಾರೆ. ಕೋವಿನ್‌ ಆ್ಯಪ್‌ ಅಥವಾ ವೆಬ್‌ಸೈಟ್‌ ಮೂಲಕ ನೀಡಲಾಗುವ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರ ನೀಡುವಿಕೆಯಲ್ಲಿ ಯು.ಕೆ. ಸರಕಾರ ಆರೋಪಿ ಸಿದಂಥ ಯಾವುದೇ ಅಂಶಗಳಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ನಿಯಮಗಳ ಪ್ರಕಾರವೇ ಅದನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತಕ್ಕಿಲ್ಲ  ಫೈಜರ್‌, ಮಾಡೆರ್ನಾ :

ಭಾರತದಲ್ಲೇ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಅಮೆರಿಕದ ಫೈಜರ್‌ ಮತ್ತು ಮಾಡೆರ್ನಾ ಲಸಿಕೆಗಳನ್ನು ತರಿಸುವ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಅಲ್ಲದೆ ಭಾರತದ ಕಾನೂನಿನಿಂದ ರಕ್ಷಣೆ ನೀಡಬೇಕು ಎಂಬ ಈ ಎರಡೂ ಕಂಪೆನಿಗಳ ವಾದವನ್ನು ತಿರಸ್ಕರಿಸಿದೆ. ಈ ಮೊದಲು ಲಸಿಕೆ ಕೊರತೆ ಇದ್ದ ಕಾರಣ ತರಿಸಿಕೊಳ್ಳಲು ನಿರ್ಧರಿಸಿದ್ದೆವು. ಈಗ ನಮ್ಮಲ್ಲೇ ಹೆಚ್ಚು ಉತ್ಪಾದನೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next