Advertisement

ಇನ್ನೂ 25 ಚೀತಾಗಳಿಗೆ ಆಶ್ರಯ ನೀಡುವ ಸಾಮರ್ಥ್ಯವಿದೆ

11:46 PM Sep 18, 2022 | Team Udayavani |

ಭೋಪಾಲ್‌: ಆಫ್ರಿಕಾದ ಚೀತಾಗಳಿಗೆ ಹೊಸ ಆವಾಸಸ್ಥಾನವಾಗಿರುವ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವು ಅಂಥ 20ರಿಂದ 25ರಷ್ಟು ಚೀತಾಗಳಿಗೆ ಆಶ್ರಯ ನೀಡುವಷ್ಟು ವಿಶಾಲವಾ­ಗಿದ್ದು, ಅಲ್ಲಿ ಅವುಗಳಿಗೆ ಅಗತ್ಯ ವಾದಷ್ಟು ಶಿಕಾರಿಗಳೂ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಚೀತಾ ಮರುಪರಿಚಯ ಯೋಜನೆ ಖಂಡಿತಾ ಯಶಸ್ವಿಯಾಗ­ಲಿದೆ. ಕುನೋ ಉದ್ಯಾನವು 750 ಚದರ ಕಿ. ಮೀ. ವ್ಯಾಪ್ತಿಯಲ್ಲಿ ಹಬ್ಬಿದ್ದು, ಅದರ ಸುತ್ತಲೂ 6 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ದಟ್ಟ ಕಾಡಿದೆ. ಮಧ್ಯಪ್ರದೇಶದ ಶಿವಪುರಿ ಮತ್ತು ಶಿಯೋಪುರ ಜಿಲ್ಲೆಗಳಿಂದ ರಾಜಸ್ಥಾನದ ಬಾರನ್‌ ಜಿಲ್ಲೆಯವರೆಗೂ ಇದು ವ್ಯಾಪಿಸಿದೆ. ಅಲ್ಲದೇ, ಈ ಚೀತಾಗಳು ಮಾನವ-ಪ್ರಾಣಿ ಸಂಘರ್ಷದ ಬಲೆಗೆ ಬೀಳುವ ಸಾಧ್ಯತೆ ಕಡಿಮೆ ಎಂದು ಮಧ್ಯಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಕ ಜೆ.ಎಸ್‌.ಚೌಹಾಣ್‌ ಹೇಳಿದ್ದಾರೆ.

ಮೋದಿ ವಿರುದ್ಧ ಜೈರಾಂ ಕಿಡಿ: “ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸಲು ಹಿಂದಿನ ಸರಕಾರಗಳು ರಚನಾತ್ಮಕ ಪ್ರಯತ್ನವನ್ನು ಮಾಡಲೇ ಇಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಹರಿಹಾಯ್ದಿದ್ದಾರೆ. ಪತ್ರವೊಂ­ದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಜೈರಾಂ, “2009ರಲ್ಲಿ ಪ್ರಾಜೆಕ್ಟ್ ಚೀತಾವನ್ನು ಅನಾವರಣಗೊಳಿಸಿದ ಪತ್ರವಿದು. ಮೋದಿ­ಯವರು ಒಬ್ಬ ವಿವೇಕವೇ ಇಲ್ಲದ ಸುಳ್ಳುಗಾರ’ ಎಂದಿದ್ದಾರೆ.

ಜತೆಗೆ 2009ರಲ್ಲಿ ವನ್ಯಜೀವಿ ಟ್ರಸ್ಟ್‌ನ ಎಂ.ಕೆ.ರಂಜಿತ್‌ಸಿನ್ಹಾರಿಗೆ “ಚೀತಾಗಳನ್ನು ಮರುಪರಿ­ಚಯಿಸುವ ಯೋಜನೆಗೆ ಮಾರ್ಗಸೂಚಿ ಸಿದ್ಧಪಡಿಸಿ’ ಎಂದು ಸೂಚಿಸಿ ಬರೆದ ಪತ್ರವನ್ನೂ ಜೈರಾಂ ಅಪ್‌ಲೋಡ್‌ ಮಾಡಿದ್ದಾರೆ.

ಎಡಿಟ್‌ ಮಾಡಿದ ಫೋಟೋ ಟ್ವೀಟ್‌
ಕುನೋ ರಾಷ್ಟ್ರೀಯ ಉದ್ಯಾನ ವನಕ್ಕೆ 8 ಚೀತಾಗಳನ್ನು ಬಿಡುಗಡೆ ಮಾಡಿದ ಬಳಿಕ ಪ್ರಧಾನಿ ಮೋದಿ ಫೋಟೊ ತೆಗೆಯುವ ವೇಳೆ ಕೆಮರಾದ ಕ್ಯಾಪ್‌ ತೆಗೆದಿರಲಿಲ್ಲ ಎಂದು ವಿಪಕ್ಷಗಳ ಕೆಲವು ಮುಖಂಡರು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಫೋಟೋ ಎಡಿಟ್‌ಮಾಡಲಾಗಿದೆ. ಅದನ್ನೇ ವಿಪಕ್ಷಗಳ ಮುಖಂಡರು ಶೇರ್‌ ಮಾಡಿದ್ದಾರೆ ಎಂದು ಬಿಜೆಪಿಯ ಡಾ| ಸುಖಾಂತ ಮಜುಂದಾರ್‌ ಟ್ವೀಟ್‌ ಮಾಡಿದ್ದಾರೆ. ನಿಕಾನ್‌ ಕಂಪೆನಿಯ ಕೆಮರಾಕ್ಕೆ ಕ್ಯಾನೊನ್‌ ಕಂಪೆನಿಯ ಕ್ಯಾಪ್‌ ಹಾಕಲಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಎಡಿಟ್‌ ಮಾಡಲಾಗಿರುವ ಫೋಟೋ ಹಂಚಿಕೊಂಡಿರುವ ಬಗ್ಗೆ ಟಿಎಂಸಿ ಸಂಸದ ಜವ್ಹಾರ್‌ ಸಿರ್ಕಾರ್‌ ಸೇರಿ ವಿಪಕ್ಷಗಳ ಹಲವು ಸಂಸದರು ಪ್ರಧಾನಿ­ ಯವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, “ಫೋಟೋ ಎಡಿಟ್‌ ಮಾಡಿದವರಿಗೆ ಕಂಪೆನಿಗಳ ಮಧ್ಯದ ವ್ಯತ್ಯಾಸವೂ ತಿಳಿದಿಲ್ಲ. ನಾಯಕರ ಬಗ್ಗೆ ಅಪಪ್ರಚಾರ ಮಾಡುವಲ್ಲಿ ನೀವು ಎಡವಿದ್ದೀರಿ’ ಎಂದು ವಿಪಕ್ಷಗಳ ನಾಯಕರ ಕಾಲೆಳೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next