ನವದೆಹಲಿ: ಭಾರತ ಮತ್ತು ಚೀನಾ ಗಡಿಭಾಗದ ಹಳ್ಳಿಗಳ ನಿವಾಸಿಗಳು ಗುಳೇ ಹೋಗುತ್ತಿರುವ ವಿಚಾರವನ್ನು ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಭದ್ರತಾ ಮಂಡಳಿಯು ಈ ವಿಚಾರದ ಕುರಿತಾಗಿ ಈಗಾಗಲೇ ಗಮನಹರಿಸಿದ್ದು, ಇದರ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಲು ಮಂಡಳಿಯು ಶುಕ್ರವಾರದಂದು ಸಭೆ ಸೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಉತ್ತರಾಖಂಡ ರಾಜ್ಯದಲ್ಲಿ ಬರುವ ಎರಡೂ ದೇಶಗಳ ಗಡಿ ಪ್ರದೇಶದ ಹಳ್ಳಿಗಳ ಜನರು ಸಾಮೂಹಿಕ ವಲಸೆ ಹೋಗುತ್ತಿರುವ ವಿಚಾರವನ್ನು ಅಧ್ಯಯನ ಮಾಡಲು ನೇಮಕಗೊಂಡಿದ್ದ ಆಯೋಗವು ತನ್ನ ಅಧ್ಯಯನ ವರದಿಯನ್ನು ಈ ಭದ್ರತಾ ಮಂಡಳಿಯ ಸಭೆಯಲ್ಲಿ ಮಂಡಿಸುವ ನಿರೀಕ್ಷೆ ಇದೆ.
ಈ ಭಾಗದ ಸುಮಾರು 14 ಹಳ್ಳಿಗಳ ನಿವಾಸಿಗಳು ತಮ್ಮ ವಾಸಸ್ಥಾನವನ್ನು ತೊರೆದು ವಲಸೆ ಹೋಗುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಇದಕ್ಕೆ ಸಂಬಂಧಿಸಿದ ವರದಿಗಳು ಕೈಸೇರಿದ ಬಳಿಕ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದೆಂದು ಇದೀಗ ನಿರೀಕ್ಷಿಸಲಾಗುತ್ತಿದೆ.
ಕಳೆದ ಏಳೆಂಟು ವರ್ಷಗಳಲ್ಲಿ ಈ ಭಾಗದಲ್ಲಿನ ಸುಮಾರು ಎಂಟು ಗ್ರಾಮಗಳಲ್ಲಿನ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಗಿತ್ತು. ಮಾತ್ರವಲ್ಲದೇ ಚೀನಾ ಸೈನಿಕರು ಆಗಾಗ್ಗೆ ಭಾರತದ ನೆಲದೊಳಕ್ಕೆ ಬಂದು ಹೋಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವೂ ಬಹಿರಂಗಗೊಂಡಿತ್ತು. ಹಾಗಾಗಿ ಇದೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಚೀನಾ ಗಡಿಭಾಗದಲ್ಲಿರುವ ಈ ಗ್ರಾಮಗಳಿಗೆ ವಿಶೇಷ ಅನುದಾನ ಮತ್ತು ಸೌಲಭ್ಯಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಒಂದು ಗ್ರಾಮ ಪಿತೋರಾಘರ್ ಜಿಲ್ಲೆಯ ಎಂಟು ಗ್ರಾಮಗಳು ಮತ್ತು ಚಂಪಾವತ್ ಜಿಲ್ಲೆಯಲ್ಲಿನ ಐದು ಗ್ರಾಮಗಳಲ್ಲಿನ ನಿವಾಸಿಗಳು ತಾವು ವಾಸವಿದ್ದ ಹಳ್ಳಿಗಳನ್ನು ಸಂಪೂರ್ಣವಾಗಿ ತೊರೆದು ಹೋಗಿದ್ದಾರೆ. ರಾಜ್ಯ ಸರಕಾರದಿಂದ ರಚನೆಗೊಂಡಿದ್ದ ಮಂಡಳಿಯ ಅಧ್ಯಕ್ಷ ಡಾ. ಎಸ್.ಎಸ್. ನೇಗಿ ಅವರ ಪ್ರಕಾರ ಇಲ್ಲಿನ ಗ್ರಾಮಸ್ಥರು ದೆಹಲಿ, ಡೆಹ್ರಾಡೂನ್ ನಂತಹ ಮಹಾನಗರಗಳಿಗೆ ವಲಸೆ ಹೋಗುವ ಬದಲು ತಮ್ಮ ಸಮೀಪದಲ್ಲಿರುವ ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಅಂಶವೂ ಕುತೂಹಲಕರವಾಗಿದೆ.
2017ರ ಉತ್ತರಾಖಂಡ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಪ್ರಮುಖ ಅಂಶವಾಗಿ ನಮೂದಿಸಿತ್ತು. ಮತ್ತು ಬಳಿಕ ಅಧಿಕಾರಕ್ಕೇರಿದ ಬಳಿಕ ಬಿಜೆಪಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿಯೊಂದರ ರಚನೆಯನ್ನೂ ಸಹ ಮಾಡಿದ್ದರು. ಮತ್ತು ಈ ಸಮಿತಿಯು ಹಲವಾರು ಹಂತಗಳಲ್ಲಿ ತನ್ನ ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಈ ಸಮಿತಿಯ ಸದಸ್ಯರು ಭಾರತ ಚೀನಾ ಗಡಿ ಭಾಗದಲ್ಲಿರುವ ಈ ಗ್ರಾಮಗಳಲ್ಲಿ ಸಂಚರಿಸಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ವಾಸ್ತವ ಚಿತ್ರಣ ಬಯಲಾಗಿತ್ತು.