Advertisement

ರಮ್ಜಾನ್‌ ವೇಳೆ ಕದನ ವಿರಾಮಕ್ಕೆ ಕೇಂದ್ರ ಅಸ್ತು

06:00 AM May 17, 2018 | Team Udayavani |

ಹೊಸದಿಲ್ಲಿ: ರಂಜಾನ್‌ ಅವಧಿಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಕದನ ವಿರಾಮ ಘೋಷಿಸಬೇಕು ಎನ್ನುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಸ್ತಾಪವನ್ನು ಕೇಂದ್ರ ಸರಕಾರ ಒಪ್ಪಿದೆ. ಸಿಎಂ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಲಾಗಿದ್ದು, ಕೆಲವೊಂದು ಷರತ್ತುಗಳೊಂದಿಗೆ ಸೀಮಿತ ಕದನ ವಿರಾಮ ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಬುಧವಾರ ತಿಳಿಸಿದೆ.

Advertisement

ರಮ್ಜಾನ್‌ ಅನ್ನು ಶಾಂತಿಯುತ ವಾತಾವರಣದಲ್ಲಿ ಆಚರಿಸಲು ಶಾಂತಿಪ್ರಿಯ ಮುಸ್ಲಿಮರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಕುರಿತು ಸಿಎಂ ಮೆಹಬೂಬಾರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಈ ನಿರ್ಧಾರವನ್ನು ಹಾಲಿ ಸಿಎಂ ಮೆಹಬೂಬಾ ಹಾಗೂ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಸೇರಿದಂತೆ ಪ್ರಮುಖರು ಸ್ವಾಗತಿಸಿದ್ದಾರೆ.

ದಾಳಿ ಮಾಡಿದರೆ ಪ್ರತ್ಯುತ್ತರ: ರಂಜಾನ್‌ ಅವಧಿಯಲ್ಲಿ ಕಣಿವೆ ರಾಜ್ಯಾದ್ಯಂತ ಯಾವುದೇ ಕಾರ್ಯಾಚರಣೆ ನಡೆಸದಂತೆ ಭದ್ರತಾ ಪಡೆಗಳಿಗೆ ಸರಕಾರ ಸೂಚಿಸಿದೆ. ಆದರೆ, ಒಂದು ವೇಳೆ ಭದ್ರತಾ ಪಡೆಗಳ ಮೇಲೆ ಯಾರಾದರೂ ದಾಳಿ ನಡೆಸಿದರೆ, ಅಂಥ ಸಂದರ್ಭದಲ್ಲಿ ತಕ್ಕ ಪ್ರತ್ಯುತ್ತರ ನೀಡಬಹುದು. ಅಷ್ಟೇ ಅಲ್ಲ, ಅಮಾಯಕರ ಜೀವವನ್ನು ರಕ್ಷಿಸಬೇಕಾದ ಸಂದರ್ಭ ಬಂದಾಗಲೂ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದೂ ಸಚಿವಾಲಯ ಹೇಳಿದೆ. ಶಾಂತಿ ನೆಲೆಸುವ ಉದ್ದೇಶದಿಂದ ಕೈಗೊಂಡಿರುವ ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಹಾಗೂ ಯಾವುದೇ ಸಮಸ್ಯೆಯಿಲ್ಲದೇ ರಂಜಾನ್‌ ಆಚರಿಸಲು ಮುಸ್ಲಿಂ ಸಹೋದರ, ಸಹೋದರಿಯರಿಗೆ ನೆರವಾಗಬೇಕು ಎಂದೂ ಗೃಹ ಇಲಾಖೆ ಹೇಳಿದೆ. ಮೇ 19ರಂದು ಪ್ರಧಾನಿ ಮೋದಿ ಅವರು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಇದರ ನಡುವೆಯೇ ಇಂಥ ಬೆಳವಣಿಗೆ ನಡೆದಿದೆ.

ಆಗಲ್ಲ ಎಂದಿದ್ದ ಬಿಜೆಪಿ: ಇತ್ತೀಚೆಗೆ ಸಿಎಂ ಮೆಹಬೂಬಾ ಅವರು ಕದನ ವಿರಾಮ ಘೋಷಣೆ ಪ್ರಸ್ತಾವ ಮಾಡಿದ್ದಾಗ ಅದನ್ನು ಬಿಜೆಪಿ ವಿರೋಧಿಸಿತ್ತು. ಇದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದೂ ಹೇಳಿತ್ತು. ಮಾನವ ಹಕ್ಕು ಸಂಸ್ಥೆಯೊಂದರ ವರದಿಯಂತೆ, ಕಣಿವೆ ರಾಜ್ಯದಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ 2016ರಲ್ಲಿ 145 ಮಂದಿ ನಾಗರಿಕರು, 2017ರಲ್ಲಿ 51 ಮಂದಿ ಮತ್ತು ಪ್ರಸಕ್ತ ವರ್ಷದ ಮೊದಲ 5 ತಿಂಗಳಲ್ಲಿ 39 ಮಂದಿ ಮೃತಪಟ್ಟಿದ್ದಾರೆ.

ಶೋಪಿಯಾನ್‌ನಲ್ಲಿ ಎನ್‌ಕೌಂಟರ್‌
ಬುಧವಾರ ಶೋಪಿಯಾನ್‌ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ ನಡೆದಿದೆ. ಸೇನಾ ಗಸ್ತು ವಾಹನದ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

Advertisement

ರಂಜಾನ್‌ ಸೀಮಿತ ಕದನ ವಿರಾಮವನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶ ಮಾಡಿದ ಪ್ರಧಾನಿ ಮೋದಿ ಹಾಗೂ ಸಚಿವ ರಾಜನಾಥ್‌ಗೆ ಧನ್ಯವಾದಗಳು.
ಮೆಹಬೂಬಾ ಮುಫ್ತಿ, 
ಜಮ್ಮು-ಕಾಶ್ಮೀರ ಸಿಎಂ

ಕೇಂದ್ರ ಸರಕಾರವು ಈಗ ಏಕಪಕ್ಷೀಯ ಕದನ ವಿರಾಮ ಘೋಷಿಸಿದೆ. ಉಗ್ರರೇನಾದರೂ ಕಾಲ್ಕೆರೆದುಕೊಂಡು ಬಂದರೆ, ಅವರ ನಿಜಬಣ್ಣ ಬಯಲಾಗುತ್ತದೆ. ಅವರು ನಿಜವಾಗಿಯೂ ಜನರ ಶತ್ರುಗಳು ಎಂಬುದು ಸಾಬೀತಾಗುತ್ತದೆ.
– ಒಮರ್‌ ಅಬ್ದುಲ್ಲಾ, 
ಜಮ್ಮು-ಕಾಶ್ಮೀರ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next