ನವದೆಹಲಿ: ಭಾರತೀಯ ಕಂಪನಿಗಳು ರಫ್ತು ಮಾಡುವ ಕೆಮ್ಮಿನ ಸಿರಫ್ಗಳ ಗುಣಮಟ್ಟದ ಕುರಿತು ಜಾಗತಿಕವಾಗಿ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇತರೆ ರಾಷ್ಟ್ರಗಳಿಗೆ ಔಷಧಗಳು ರಫ್ತಾಗುವ ಮುನ್ನ ಅದನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ.
ಸರ್ಕಾರಿ ಪ್ರಯೋಗಾಲಯಗಳಲ್ಲಿ ಔಷಧಗಳ ಪರೀಕ್ಷೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶಿಫಾರಸ್ಸಿನ ಪ್ರಕಾರ, ರಫ್ತುದಾರರು ಸರ್ಕಾರಿ ಪ್ರಯೋಗಾಲಯಗಳಿಂದ ನೀಡಲಾದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನಂತರವಷ್ಟೇ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್(ಡಿಜಿಎಫ್ಟಿ) ರಫ್ತಿಗೆ ಅನುಮತಿ ನೀಡಲಿದೆ.
ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಯ ಪ್ರಯೋಗಾಲಯಗಳಾದ ಆರ್‌ಡಿಟಿಎಲ್(ಚಂಡೀಗಢ), ಸಿಡಿಎಲ್(ಕೋಲ್ಕತ), ಸಿಡಿಟಿಐ(ಚೆನ್ನೈ), ಸಿಡಿಟಿಐ(ಹೈದರಾಬಾದ್), ಸಿಡಿಟಿಎಲ್(ಮುಂಬೈ), ಆರ್‌ಡಿಟಿಐ(ಗುವಾಹಟಿ) ಮತ್ತು ರಾಜ್ಯ ಸರ್ಕಾರಗಳ ಎಲ್‌ಎಬಿಎಲ್-ಮಾನ್ಯತೆ ಪಡೆದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ರಫ್ತುದಾರ ಕಂಪನಿಗಳು ತಮ್ಮ ಔಷಧಗಳನ್ನು ತಪಾಸಣೆ ನಡೆಸಿದ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.