ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ಯಾವುದೇ ಅಪರಾಧಗಳ ಬಗ್ಗೆ ಎಫ್ಐಆರ್ ದಾಖಲಿಸುವಲ್ಲಿ ತಡ ಮಾಡಕೂಡದು ಎಂದು ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಈ ಕುರಿತಂತೆ ಸೂಚನೆ ನೀಡಿರುವ ಕೇಂದ್ರ ಗೃಹ ಇಲಾಖೆ, ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಾನೂನಾತ್ಮಕವಾಗಿ ಆದ್ಯತೆ ನೀಡಬೇಕು. ದೂರುದಾರರು ಅಥವಾ ಸಾಕ್ಷಿಗಳಿಗೆ ರಕ್ಷಣೆ ನೀಡುವುದು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಗೆ ರಕ್ಷಣೆ ನೀಡುವುದು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆಯಾಗಿರಬೇಕು. ಜೊತೆಗೆ, ನ್ಯಾಯಾಲಯಗಳಲ್ಲಿ ಇಂಥ ಪ್ರಕರಣಗಳ ತ್ವರಿತ ವಿಚಾರಣೆ ನಡೆಯಲು ಎಸ್‌ಪಿ ನೆರವು ನೀಡಬೇಕು ಎಂದಿದೆ.