Advertisement

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

11:41 PM Jun 23, 2021 | Team Udayavani |

ವಿದ್ಯುತ್‌ ಬಳಕೆದಾರರಿಗೆ ಬಿಲ್‌ ಹೊರೆಯನ್ನು ಕಡಿಮೆಗೊಳಿಸುವ ಮತ್ತು ಒಟ್ಟಾರೆ ವಿದ್ಯುತ್‌ ವಿತರಣ ವ್ಯವಸ್ಥೆಯನ್ನು ಏಕೀಕೃತಗೊಳಿಸು ಉದ್ದೇಶದಿಂದ ಕೇಂದ್ರ ಸರಕಾರ ಮುಂದಿನ ವರ್ಷ ಎಪ್ರಿಲ್‌ 1ರಿಂದ ವಿದ್ಯುತ್‌ ಮಾರುಕಟ್ಟೆ ಆಧಾರಿತ ಮಿತವ್ಯಯಿ ಬಟವಾಡೆ (ಎಂಬಿಇಡಿ) ಯೋಜನೆಯ ಜಾರಿಗೆ ಚಿಂತನೆ ನಡೆಸಿದೆ. ಇದು ಅನುಷ್ಠಾನಕ್ಕೆ ಬಂದಲ್ಲಿ  ವಾರ್ಷಿಕ 12 ಸಾವಿರ ಕೋ. ರೂಗಳ ಉಳಿತಾಯವಾಗಲಿದೆ.  ಈ ಹೊಸ ಕಾರ್ಯತಂತ್ರದ ಜಾರಿಗಾಗಿ ಕೇಂದ್ರ ಇಂಧನ ಸಚಿವಾಲಯವು “ಒಂದು ರಾಷ್ಟ್ರ, ಒಂದು ಗ್ರೀಡ್‌, ಒಂದು ತರಂಗಾಂತರ, ಒಂದು ದರ’ ಎಂಬ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.

Advertisement

ಸದ್ಯ ದೇಶದಲ್ಲಿ ವಿದ್ಯುತ್‌ ಉತ್ಪಾದನೆ, ವಿತರಣೆಗಾಗಿ ರಾಜ್ಯ ಅಥವಾ ಪ್ರಾದೇಶಿಕ ನೆಲೆಯಲ್ಲಿ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ. ಇದರಿಂದಾಗಿ ಪ್ರತಿಯೊಂದು ಹಂತದಲ್ಲಿಯೂ ಹೂಡಿಕೆ ಮತ್ತು ವೆಚ್ಚಗಳು ಆಯಾಯ ರಾಜ್ಯ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಇದು ಸಹಜವಾಗಿಯೇ ಒಟ್ಟಾರೆ ವ್ಯವಸ್ಥೆಯ ಮೇಲೆ ಹೆಚ್ಚುವರಿ ಹೊರೆ ಬೀಳುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿ ಕಾರ್ಯವಿಧಾನಗಳ ಬದಲಾಗಿ ದೇಶಾದ್ಯಂತ ಏಕರೂಪದ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ಇಲಾಖೆ ಈ ಹೊಸ ಯೋಜನೆಯನ್ನು ರೂಪಿಸಿದೆ. ಇದರಿಂದ ದೇಶಾದ್ಯಂತ ವಿದ್ಯುತ್‌ ಉತ್ಪಾದನೆ, ವಿತರಣ ಜಾಲ ಏಕೀಕೃತಗೊಳ್ಳಲಿದ್ದು ಹಾಲಿ ವ್ಯವಸ್ಥೆಯಲ್ಲಿನ ಲೋಪದೋಷಗಳು ನಿವಾರಣೆಯಾಗಿ ಸಂಪೂರ್ಣ ವ್ಯವಸ್ಥೆ ಸುಧಾರಣೆ ಹೊಂದಲಿದೆ. ಈ ಸುಧಾರಿತ ವ್ಯವಸ್ಥೆಯ ಭಾಗವಾಗಿ ಎಂಬಿಇಡಿ ಯೋಜನೆ ಜಾರಿಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬೇಡಿಕೆಯಲ್ಲಿ ಕುಸಿತ : ದೇಶದಲ್ಲಿ ಕೋವಿಡ್‌ ಮೊದಲ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ವಿದ್ಯುತ್‌ ಬೇಡಿಕೆ ಕುಸಿದಿತ್ತು. ಸರಕಾರ ದೇಶಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದಾಗಿ ಎಲ್ಲ ಉದ್ಯಮಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇ ಅಲ್ಲದೆ ಮಾರುಕಟ್ಟೆಗಳೂ ಬಂದ್‌ ಆಗಿದ್ದವು. ಈ ಕ್ಷೇತ್ರದಿಂದ ವಿದ್ಯುತ್‌ ಇಲಾಖೆಗೆ ಹೆಚ್ಚಿನ ಬೇಡಿಕೆ ಮತ್ತು ಆದಾಯ ಬರುವುದರಿಂದ ಇದು ಸಹಜವಾಗಿಯೇ ವಿದ್ಯುತ್‌ ಬೇಡಿಕೆ ಮಾತ್ರವಲ್ಲದೆ ಆದಾಯಕ್ಕೂ ಹೊಡೆತ ನೀಡಿತ್ತು. ಇನ್ನು ಈ ಅವಧಿಯಲ್ಲಿ ಗೃಹಬಳಕೆ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದರೂ ಭಾರೀ ಪ್ರಮಾಣದ ಆದಾಯವೇನೂ ಹರಿದು ಬಂದಿರಲಿಲ್ಲ. ಎರಡನೇ ಅಲೆಯ ವೇಳೆಯೂ ವಿದ್ಯುತ್‌ ಬೇಡಿಕೆ ಮತ್ತೆ ಕುಸಿತ ಕಂಡಿದೆ. ಕೊರೊನಾ ಮೊದಲನೇ ಅಲೆಯಿಂದ ಚೇತರಿಸಿಕೊಂಡ ಬಳಿಕ  ಜನವರಿಯಲ್ಲಿ ದೇಶ ಗರಿಷ್ಠ ಪ್ರಮಾಣದಲ್ಲಿ ಅಂದರೆ 189.6 ಗಿಗಾವಾಟ್‌ ವಿದ್ಯುತ್‌ ಬೇಡಿಕೆಯನ್ನು ದಾಖಲಿಸಿತ್ತು.

ಯಾವ  ರೀತಿಯಲ್ಲಿ ಪ್ರಯೋಜನ? : ಸದ್ಯ ದೇಶದ ಒಟ್ಟಾರೆ ವಿದ್ಯುತ್‌ ವಿತರಣ ವ್ಯವಸ್ಥೆಯನ್ನು  ಸರಕಾರಿ ಸ್ವಾಮ್ಯದ ಪವರ್‌ ಸಿಸ್ಟಮ್‌ ಆಪರೇಶನ್‌ ಕಾರ್ಪ್‌ ಲಿಮಿಟೆಡ್‌ ನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌(ಎನ್‌ಎಲ್‌ಡಿಸಿ), ಪ್ರಾದೇಶಿಕ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌(ಆರ್‌ಎಲ್‌ಡಿಸಿ)ಮತ್ತು ರಾಜ್ಯ ಲೋಡ್‌ ಡಿಸ್ಪ್ಯಾಚ್‌ ಸೆಂಟರ್‌(ಎಸ್‌ಎಲ್‌ಡಿಸಿ)ಮೂಲಕ ವಿದ್ಯುತ್‌ ವಿತರಣೆ ಮಾಡುತ್ತಿದೆ. ಪ್ರಸ್ತುತ ದೇಶದಲ್ಲಿ 33 ಎಸ್‌ಎಲ್‌ಡಿಸಿ, ಐದು ಆರ್‌ಎಲ್‌ಡಿಸಿ ಮತ್ತು ಒಂದು ಎನ್‌ಎಲ್‌ಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ವ್ಯವಸ್ಥೆಗಳ ಪ್ರತ್ಯಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸುತ್ತಿದ್ದು ವಿದ್ಯುತ್‌ ಉತ್ಪಾದನ ಮೂಲಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇವುಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸಂಕೀರ್ಣ ವ್ಯವಸ್ಥೆಯಿಂದಾಗಿ ರಾಜ್ಯಗಳಲ್ಲಿ ಅಗ್ಗದ ವಿದ್ಯುತ್‌ ಉತ್ಪಾದನ ಘಟಕಗಳು ಇದ್ದರೂ ಅವುಗಳಿಂದ ಉತ್ಪಾದನೆಯಾದ ವಿದ್ಯುತ್‌ ಅನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದೇ ದುಬಾರಿ ಉತ್ಪಾದನ ಘಟಕಗಳಿಗೆ ಶರಣಾಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೊಸ ವ್ಯವಸ್ಥೆ (ಎಂಬಿಇಡಿ)ಯ ಜಾರಿಯಿಂದ ವಿದ್ಯುತ್‌ ಉತ್ಪಾದಕರಿಗೆ, ವಿತರಕ ಸಂಸ್ಥೆಗಳಿಗೆ ಮತ್ತು ಬಳಕೆದಾರರಿಗೆ  ಪ್ರಯೋಜನವಾಗಲಿದ್ದು ಇದನ್ನು ಹಂತಹಂತವಾಗಿ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ.

ಪರಸ್ಪರ ಸಮನ್ವಯ ಅಗತ್ಯ : ದೇಶದ ವಿದ್ಯುತ್‌ ಸರಬರಾಜು ಜಾಲವು ಅತ್ಯಂತ ಸಂಕೀರ್ಣವಾಗಿದ್ದು, ವಿವಿಧ ಪ್ರದೇಶಗಳ ನಡುವೆ ಅಂತರ್‌ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಗ್ರಿಡ್‌ ನಿರ್ವಾಹಕರು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕಲ್ಲಿದ್ದಲು, ಅನಿಲ, ಜಲ, ಪರಮಾಣು ಮತ್ತು ಹಸುರು ಇಂಧನ ಸಹಿತ ವಿವಿಧ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವ ವಿದ್ಯುತ್‌ ಸ್ಥಾವರಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ. ಆದರೆ ಸದ್ಯದ ಸಂಕೀರ್ಣ ವ್ಯವಸ್ಥೆಯಿಂದಾಗಿ ಇದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಎಂಬಿಇಡಿ ಜಾರಿಗೆ ಇಂಧನ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ.

Advertisement

ಉತ್ಪಾದನೆ-ಬೇಡಿಕೆ : 2022ರ ವೇಳೆಗೆ 100 ಗಿಗಾ ವ್ಯಾಟ್‌ ಸೌರ ವಿದ್ಯುತ್‌ ಮತ್ತು 60 ಗಿಗಾ ವ್ಯಾಟ್‌ಗಳಷ್ಟು ಪವನ ವಿದ್ಯುತ್‌ ಸಹಿತ ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗಿಗಾ ವ್ಯಾಟ್‌ಗಳಷ್ಟು ವಿದ್ಯುತ್‌ ಅನ್ನು ಉತ್ಪಾದಿಸಲು ಬೃಹತ್‌ ಯೋಜನೆಯೊಂದನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಸದ್ಯ ದೇಶದ ಒಟ್ಟಾರೆ ವಿದ್ಯುತ್‌ ಉತ್ಪಾದನ ಸಾಮರ್ಥ್ಯ 379.13 ಗಿಗಾ ವ್ಯಾಟ್‌ಗಳಷ್ಟಾಗಿದ್ದು ,ಇದರಲ್ಲಿ  ಕೇಂದ್ರ ಮತ್ತು ರಾಜ್ಯ ವಲಯದ ಯೋಜನೆಗಳು ಕ್ರಮವಾಗಿ 96.18 ಗಿ.ವ್ಯಾ. ಮತ್ತು 103.62 ಗಿ.ವ್ಯಾ.ಗಳಷ್ಟಾಗಿದೆ. ದೇಶದ ಒಟ್ಟು ಬೇಡಿಕೆಯಲ್ಲಿ ಕೈಗಾರಿಕೆ ಮತ್ತು ಕೃಷಿ ಬಳಕೆಗೆ ಕ್ರಮವಾಗಿ ಶೇ.41.6 ಮತ್ತು ಶೇ. 17.69 ರಷ್ಟಾಗಿದೆ. ಶೇ. 8.24ರಷ್ಟು ವಾಣಿಜ್ಯ ವಲಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next