ಬೀದರ್: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲನೆಗಾಗಿ ಕೇಂದ್ರದ ಅಧ್ಯಯನ ತಂಡ ಎರಡು ಮೂರು ದಿನಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ ಪ್ರತಾಪ ನೇತೃತ್ವದ ಆರು ಜನ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಲಿದೆ. ಈ ತಂಡ ಮೂರು ನಾಲ್ಕು ದಿನ ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸ ನಡೆಸಿ, ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಾನು ಸಹ ತಂಡದ ಜತೆ ಚರ್ಚೆ ನಡೆಸಿ ಮಳೆಯಿಂದಾಗಿರುವ ಹಾನಿ ಮತ್ತು ಅನಾಹುತ ಬಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ಬೆಳೆ ಪರಿಹಾರಕ್ಕೆ ಹಿಂದೇಟಿಲ್ಲ: ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರ ಸರ್ಕಾರ ನಿಲ್ಲಲಿದೆ. ಯಾವುದೇ ಆರ್ಥಿಕ ಸಮಸ್ಯೆ ಎದುರಾದರೂ ಸರ್ಕಾರ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಡಲು ಹಿಂದೇಟು ಹಾಕಲ್ಲ. ನೆರೆ ಪರಿಸ್ಥಿತಿ ನಿರ್ವಹಣೆಗೆ ಹಣದ ಕೊರತೆ ಇಲ್ಲ, ಕಾಮಗಾರಿಗಳಿಗಾಗಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ 947 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಸಚಿವ ಅಶೋಕ, ಎನ್‌ಡಿಆರ್‌ಎಫ್‌ನಡಿ ರಾಜ್ಯಕ್ಕೆ 2ನೇ ಕಂತಿನಡಿ 395 ಕೋಟಿ ರೂ.ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೊಸದಾಗಿ ಐದು ತಂಡ ಸೇರಿ ರಾಜ್ಯಕ್ಕೆ ಒಟ್ಟು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಟಿಪ್ಪು ನೆಲದ ಮಗ ಎಂದು ವಿಶ್ವನಾಥ್ ಹೇಳಿರುವುದು ಸತ್ಯ: ಸಂಸದ ಡಿ ಕೆ ಸುರೇಶ್
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇನ್ನುಂದೆ ಕೃಷಿ ಇಲಾಖೆ ಬದಲು ಕಂದಾಯ ಇಲಾಖೆಯಿಂದಲೇ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿ ಆತ್ಮಹತ್ಯೆ ಮಾಡಿಕೊಂಡ 24 ಗಂಟೆಯಲ್ಲೇ ರೈತ ಕುಟುಂಬಕ್ಕೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆಗೆ ವೃದ್ಧಾಪ್ಯ ವೇತನ: ವೃದ್ಧಾಪ್ಯ ವೇತನ ವಿತರಣೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದಿಸೆಯಲ್ಲಿ ಸರ್ಕಾರ ವಿಶೇಷ ಕ್ರಮ ವಹಿಸುತ್ತಿದೆ. ಆಧಾರ್ ಕಾರ್ಡ್‌ನಲ್ಲಿ 60 ವರ್ಷ ಆದ ಅರ್ಹರನ್ನು ಸರ್ಕಾರವೇ ಫಲಾನುಭವಿಗಳೆಂದು ಗುರುತಿಸಿ, ಯಾವುದೇ ದಾಖಲೆಗಳು, ದೃಢೀಕರಣ ಇಲ್ಲದೇ, ಕೇವಲ ಭಾವಚಿತ್ರ ಪಡೆದು, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ವೇತನ ಪಾವತಿಸಲಿದೆ. ಅಂಚೆ ಇಲಾಖೆ ಮೂಲಕ ಪೆನ್ಶನ್ ಹಣ ತಲುಪಲು ಎರಡ್ಮೂರು ತಿಂಗಳು ವಿಳಂಬ, ಸಿಬ್ಬಂದಿ ಲಂಚ ಪಡೆಯುತ್ತಾರೆ ಎಂಬ ದೂರುಗಳ ಹಿನ್ನಲೆಯಲ್ಲಿ ಬ್ಯಾಂಕ್‌ಗಳ ಮೂಲಕ ವೇತನ ಪಾವತಿಸಿ ಪಾರದರ್ಶಕತೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.