ಬೆಂಗಳೂರು: ರಾಜಧಾನಿಯಲ್ಲಿ ಅಳವಡಿಸಿಕೊಂಡಿರುವ ಟೆಂಡರ್ ಶ್ಯೂರ್ ಯೋಜನೆಯನ್ನು ದೇಶದ ಇತರೆ ನಗರಗಳಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪಾದಚಾರಿ ಸ್ನೇಹಿ ಮಾರ್ಗ, ವಾಹನ ಸಂಚಾರಕ್ಕೆ ಉತ್ತಮ ರಸ್ತೆಯನ್ನೊಳಗೊಂಡ ಟೆಂಡರ್ ಶ್ಯೂರ್ ಯೋಜನೆಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದ್ದು, ಸ್ಮಾರ್ಟ್‌ಸಿಟಿಯಡಿ ದೇಶದ ವಿವಿಧ ನಗರಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿದೆ.
ಕೇಂದ್ರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಕಾರ್ಯಕ್ರಮದಡಿ ಕೈಗೊಳ್ಳಬೇಕಾದ ಯೋಜನೆಗಳ ಆಯ್ಕೆಗಾಗಿ 100 ಸದಸ್ಯರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಅದರಂತೆ ಕೆಲ ಸದಸ್ಯರು ಬೆಂಗಳೂರಿನಲ್ಲಿನ ಟೆಂಡರ್ ಶ್ಯೂರ್ ಯೋಜನೆಯನ್ನು ಸಮಿತಿ ಮುಂದೆ ಪ್ರಸ್ತಾಪಿಸಿದ್ದು, ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ನಗರಗಳಲ್ಲಿ “ಸ್ಮಾರ್ಟ್ ರಸ್ತೆ’ ಹೆಸರಿನಲ್ಲಿ ಟೆಂಡರ್‌ಶ್ಯೂರ್ ಮಾದರಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಂದ ಯೋಜನೆ ಕುರಿತು ಸಮಿತಿ ಸದಸ್ಯರು ಮಾಹಿತಿ ಪಡೆದಿದ್ದು, ನಾಗ್ಪುರ, ಸೂರತ್, ಭೂಪಾಲ್ ಸೇರಿ ದೇಶದ 10ಕ್ಕೂ ಹೆಚ್ಚು ನಗರಗಳಲ್ಲಿ ಸ್ಮಾರ್ಟ್ ರಸ್ತೆ ನಿರ್ಮಿಸಲು ಚಿಂತನೆ ನಡೆದಿದೆ. ಅದರಂತೆ 1 ಕಿ.ಮೀ. ಸ್ಮಾರ್ಟ್ ರಸ್ತೆ ನಿರ್ಮಾಣಕ್ಕೆ 15 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ನಗರದ 12 ರಸ್ತೆಗಳಲ್ಲಿ ಈಗಾಗಲೇ ಟೆಂಡರ್‌ಶ್ಯೂರ್ ಯೋಜನೆ ಅನುಷ್ಠಾನಗೊಳಿಸಿದ್ದು,
ರಸ್ತೆ ಅಗೆತ ತಪ್ಪಿಸುವುದು ಹಾಗೂ ಪಾದಚಾರಿಗಳಿಗೆ ಉತ್ತಮ ಮಾರ್ಗ ಕಲ್ಪಿಸುವುದು ಯೋಜನೆ ಉದ್ದೇಶವಾಗಿದೆ. ಅದರಂತೆ ಪಾದಚಾರಿ ಮಾರ್ಗದ ಕೆಳಗೆ ಒಳಚರಂಡಿ, ಕುಡಿಯುವ ನೀರು, ಒಎಫ್‌ಸಿ, ಬೆಸ್ಕಾಂ ಸೇವೆಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದು, ಅವುಗಳಿಗೆ ಸಂಬಂಧಿಸಿದ ದುರಸ್ತಿಯಿದ್ದರೆ, ಅದಕ್ಕಾಗಿ ಡಕ್ಟ್ಗಳನ್ನು ಅಳವಡಿಸಲಾಗಿದೆ.
ನಗರದಲ್ಲಿ ಪಾಲಿಕೆಯಿಂದ ಅನುಷ್ಠಾನಗೊಳಿಸಿರುವ ಟೆಂಡರ್ ಶ್ಯೂರ್ ಯೋಜನೆಗೆ ಕೇಂದ್ರ ಸರ್ಕಾರದ ಮನ್ನಣೆ ದೊರೆತಿದೆ. ಯೋಜನೆಯ ಕುರಿತು ಸ್ಮಾರ್ಟ್‌ಸಿಟಿ ಯೋಜನೆಯ ತಜ್ಞರ ಸಮಿತಿ ಸದಸ್ಯರು ಪಾಲಿಕೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.
-ಕೆ.ಟಿ.ನಾಗರಾಜ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್