Advertisement
ಸ್ಥಳೀಯವಾಗಿ ಬೆಳೆಯುವ ಭತ್ತವನ್ನು ಖರೀದಿಸಿ, ಕುಚ್ಚಲಕ್ಕಿಯನ್ನು ಪಡಿತರ ವ್ಯವಸ್ಥೆಯಡಿ ವಿತರಿಸಬೇಕು ಎಂಬ ಕರಾವಳಿಗರ ಹಲವು ವರ್ಷದ ಬೇಡಿಕೆ ಈಗ ಈಡೇರಿದೆ.
ಉಡುಪಿ, ದ.ಕ. ಮತ್ತು ಉ.ಕ. ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ ಎಂಒ4, ಸ್ಥಳೀಯ ಕುಚ್ಚಲಕ್ಕಿ ಪ್ರಭೇದ ಗಳಾದ ಕಜೆಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮಾ ತಳಿಗಳನ್ನು ಎಂಎಸ್ ಪಿ ಅಡಿ ಖರೀದಿಸಿ, ಪಿಡಿಎಸ್ ಮೂಲಕ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಆದರೆ ಈ ವರ್ಷ ರೈತರು ಬೆಳೆದ ಭತ್ತವನ್ನು ಈಗಾಗಲೇ ಬಹುತೇಕ ಮಾರಾಟ ಮಾಡಿರುವುದರಿಂದ ಹಾಗೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಭತ್ತ ನೀಡಲು ರೈತರು ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಸದ್ಯ ಖರೀದಿ ಹಾಗೂ ವಿತರಣೆ ಕಷ್ಟಸಾಧ್ಯವಾಗಬಹುದು. ಉಡುಪಿ ಹಾಗೂ ದ.ಕ. ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕರ್ನಾಟಕ ಸರಕಾರ ಬೇಡಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಮನವಿಯನ್ನು ಪರಿಗಣಿಸಿದ ಸಚಿವ ಪಿಯೂಷ್ ಗೋಯಲ್ ಜ. 6ರಂದು ಶೋಭಾ ಕರಂದ್ಲಾಜೆಯವರಿಗೆ ಪತ್ರ ಬರೆದು, ಕುಚ್ಚಲಕ್ಕಿ ಖರೀದಿಸಿ, ಪಡಿತರ ಮೂಲಕ ವಿತರಿಸಲು ರಾಜ್ಯಕ್ಕೆ ಅನುಮತಿಸಿರುವುದಾಗಿ ತಿಳಿಸಿದ್ದಾರೆ.
ಕೇಂದ್ರದ ಈ ಅನುಮತಿಯೊಂದಿಗೆ ಉಡುಪಿ-ದ.ಕ.ದ ರೈತರ ಕೃಷಿ ಉತ್ಪಾದನೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅಲ್ಲದೇ ಉಡುಪಿ-ದ.ಕ. ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿ
ಸುವ ಬೇಡಿಕೆಗೆ ಪುಷ್ಟಿ ಸಿಕ್ಕಿದೆ. ಕರಾವಳಿಯ ಜನತೆ ಇದರ ಪ್ರಯೋಜನ ಪಡೆಯುವಂತೆ ಸಚಿವೆ ಶೋಭಾ ಕೋರಿದ್ದಾರೆ.
Related Articles
Advertisement
ಸ್ಥಳೀಯ ಭತ್ತ ಖರೀದಿಸಿ, ಕುಚ್ಚಲು ಅಕ್ಕಿಯನ್ನು ಪಿಡಿಎಸ್ ಮೂಲಕ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಶೀಘ್ರವೇ ಖರೀದಿ ಪ್ರಕ್ರಿಯೆ ಆರಂಭಿಸಲಿದ್ದೇವೆ. ಬೇಡಿಕೆಯಷ್ಟು ನಮ್ಮ ಜಿಲ್ಲೆಗಳಲ್ಲಿ ಆಗದೇ ಇದ್ದರೆ, ಇದೇ ತಳಿಯ ಭತ್ತಗಳು ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿ ಬೆಳೆಯುತ್ತಾರೆ ಎಂಬುದನ್ನು ಪರಿಶೀಲಿಸಿ ಅಲ್ಲಿಂದ ಖರೀದಿಸಿ ಇಲ್ಲಿ ವಿತರಿಸಲಿದ್ದೇವೆ.– ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಸಚಿವೆ (ರಾಜ್ಯಖಾತೆ) ಸ್ಥಳೀಯ ಭತ್ತ ಖರೀದಿಸಿ, ಅದರಿಂದ ಆಗುವ ಕುಚ್ಚಲು ಅಕ್ಕಿಯನ್ನು ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ವಿತರಿಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಕೇಂದ್ರ ಸರಕಾರ ಈಗ ಅನುಮೋದನೆ ನೀಡಿರುವುದು ತುಂಬ ಖುಷಿ ತಂದಿದೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವ