ಬೆಂಗಳೂರು: ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು, ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್ ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಹೊಸ ಸಾಫ್ಟ್ ವೇರ್ ಅಳವಡಿಸಲು ಶೇ.60ರಷ್ಟು ಹಣವನ್ನು ಕೇಂದ್ರ ಸರ್ಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್ ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇಶನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂತಹ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.
ಈ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ ಎಂದು ವಿವರ ನೀಡಿದರು.