ಸಿಂಧನೂರು (ರಾಯಚೂರು): ರಾಜ್ಯದಲ್ಲಿ ಬರಗಾಲ ಬಂದಿ ದ್ದರೂ ಕೇಂದ್ರ ಸರಕಾರದಿಂದ ನಯಾಪೈಸೆ ಬಂದಿಲ್ಲ. ಡಿ. 23ರಂದು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. ಆದರೆ ಈವರೆಗೂ ಸಭೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ಮತ್ತೆ ಹರಿಹಾಯ್ದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯದ 25 ಸಂಸದರು ಈ ಬಗ್ಗೆ ಕೇಳಲಿ. ಕೇಂದ್ರ ಸರಕಾರ ರಾಜ್ಯದ ಜನರ ನೆರವಿಗೆ ಬರದಿದ್ದರೂ ನಾವು ರಾಜ್ಯದ ಜನರ ಕೈಬಿಡುವುದಿಲ್ಲ ಎಂದರು.
ಪ್ರಧಾನಿ ಮೋದಿ, “ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಸರಕಾರ ದಿವಾಳಿಯಾಗುತ್ತದೆ’ ಎಂದಿದ್ದರು. ನಮ್ಮ ಸರಕಾರ ಎಲ್ಲ ಗ್ಯಾರಂಟಿ ಜಾರಿ ಮಾಡಿದ ಮೇಲೆಯೂ ಆರ್ಥಿಕವಾಗಿ ಸುಭದ್ರವಾಗಿದೆ ಎಂಬುದನ್ನು ಅವರು ಗಮನಿಸಲಿ ಎಂದು ಕುಟುಕಿದರು.
ಕನ್ನಡಿಗರು ಪ್ರತೀ ವರ್ಷ
ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಕೇಂದ್ರ ನಮಗೆ ವಾಪಸ್ ಕೊಡುವುದು 52 ಸಾವಿರ ಕೋಟಿ ರೂ. ಮಾತ್ರ. ಮೊದಲು ಕೇಂದ್ರ ಸರಕಾರ ರಾಜ್ಯದ ಪಾಲಿನ ತೆರಿಗೆ ಹಣ ಕೊಡಲಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ