ಹೊಸದಿಲ್ಲಿ: ದಶಕಗಳಿಂದ ನನೆಗುದಿಗೆ ಬಿದ್ದಿರುವ ಕರ್ನಾಟಕದ ಮೂರು ಯೋಜನೆಗಳ ಸಹಿತ ಒಟ್ಟು 116 ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಲು ಕೇಂದ್ರ ಸರಕಾರ ಚಿಂತಿಸಿದೆ.
ಒಟ್ಟು 1.26 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆಗಳು ಕಾರ್ಯಗತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ಯೋಜನೆಗಳಿಗೆ ರಾಜ್ಯ ಸರಕಾರಗಳು ಸರಿಯಾಗಿ ಸ್ಪಂದಿಸಿಲ್ಲ, ಇನ್ನು ಕೆಲವು ಕಡೆ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ.
ಈಗಾಗಲೇ 20,311 ಕೋಟಿ ರೂ. ಖರ್ಚಾಗಿದೆ. ವಿಳಂಬವಾಗಿರುವುದರಿಂದ ವೆಚ್ಚ ಶೇ. 49ರಷ್ಟು ಏರಿದೆ. ಇಂತಹ ಯೋಜನೆಗಳಿಗಾಗಿ ಅನಗತ್ಯವಾಗಿ ಹಣ ಮೀಸಲಿಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆನ್ನುವುದು ಎಂಬುದು ಸರಕಾರದ ಆತಂಕ.
ರೈಲ್ವೇಗೆ ಸೇರಿದ 72 ಯೋಜನೆಗಳು ಸರಕಾರಕ್ಕೆ ಬಿಸಿತುಪ್ಪವಾಗಿವೆ. ಈ ಪೈಕಿ 15 ಯೋಜನೆಗಳಿಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗೆ ಸೇರಿದ 33 ಯೋಜನೆಗಳು ಅಮಾನ ತಾಗುವ ಸಾಧ್ಯತೆಯಿದೆ. ಸದ್ಯ ರೈಲ್ವೇ ಯೋಜನೆಗಳನ್ನು ಪೂರೈಸಲು 88,373 ಕೋಟಿ ರೂ. ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಯೋಜನೆಗಳಿಗೆ 26,291 ಕೋಟಿ ರೂ.ಗಳ ಅಗತ್ಯವಿದೆ.
ಇದೇ ರೀತಿ ನನೆಗುದಿಗೆ ಬಿದ್ದಿರುವ 6 ಕಲ್ಲಿದ್ದಲು ಯೋಜನೆಗಳಿಗೆ 5,764 ಕೋಟಿ ರೂ., ಪೆಟ್ರೋಲಿಯಂಗೆ ಸಂಬಂಧಿಸಿದ ಎರಡು ಯೋಜನೆಗಳಿಗೆ 2,183 ಕೋಟಿ ರೂ., ಇಂಧನಕ್ಕೆ ಸಂಬಂಧಿಸಿದ ಎರಡು ಯೋಜನೆಗಳಿಗೆ 3,112 ಕೋಟಿ ರೂ., ಹಾಗೂ ಒಂದು ನೀರಾವರಿ ಯೋಜನೆಗೆ 345 ಕೋಟಿ ರೂ.ಗಳ ಅಗತ್ಯವಿದೆ.
ರಾಜ್ಯವಾರು ನನೆಗುದಿಗೆ ಬಿದ್ದಿರುವ ಯೋಜನೆಗಳು
-ಬಹು ರಾಜ್ಯಗಳನ್ನು ಒಳಗೊಂಡ ಯೋಜನೆಗಳು 24
-ತಮಿಳುನಾಡು 14
-ಬಿಹಾರ 13
-ಮಹಾರಾಷ್ಟ್ರ , ಪಶ್ಚಿಮ ಬಂಗಾಲ 07
-ತೆಲಂಗಾಣ, ರಾಜಸ್ಥಾನ 06
-ಉತ್ತರ ಪ್ರದೇಶ 05
-ಆಂಧ್ರಪ್ರದೇಶ 04
-ಕರ್ನಾಟಕ, ಉತ್ತರಾಖಂಡ, ಕೇರಳ, ಅಸ್ಸಾಂ 03