ಕಲಬುರಗಿ: ದೇಶದ ಬಡ ಮಕ್ಕಳಿಗೆ ನೀಡಲಾಗುತ್ತಿರುವ ಶಿಷ್ಯವೇತನವನ್ನು ರದ್ದು ಮಾಡುವ ಮೂಲಕ ಬಿಜೆಪಿ ಹಾಗೂ ನರೇಂದ್ರ ಮೋದಿ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವಂತ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಕರ್ನಾಟಕ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಆರೋಪಿಸಿದರು.
ನಗರದ ಸರಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಚರ್ಚೆ ಇಲ್ಲದೆ, ಏಕಾಏಕಿಯಾಗಿ 1ರಿಂದ 8ನೇ ತರಗತಿ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ರದ್ದು ಮಾಡಿದರೆ ಮಕ್ಕಳ ಗತಿ ಏನು? ಅವರು ಹೇಗೆ ಶಿಕ್ಷಣ ಪಡೆಯಬೇಕು ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿಯ ಕುತಂತ್ರವಾಗಿದೆ. ಬಹಳ ಪ್ರಮುಖವಾಗಿ ಎಸ್ಸಿಎಸ್‌ಟಿ ಮತ್ತುಓಬಿಸಿ ಮಕ್ಕಳು ಶಿಕ್ಷಣವನ್ನು ಪಡೆಯಲೇಬಾರದು ಎನ್ನುವ ಕಾರಣಕ್ಕೆ ಇಂತಹ ಕೆಟ್ಟ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ದೇಶದಲ್ಲಿ ಇದೇ ರೀತಿಯಾಗಿ ಬಿಜೆಪಿ ಜನರ ಜೀವದೊಂದಿಗೆ ಆಟವಾಡುತ್ತಿದೆ. ಅವರು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಮಾಡುವ ಮುಖೇನ ಜೀವನ ಮುಗಿಸಲು ನೋಡುತ್ತಿದ್ದಾರೆ. ನಾವು ಜನರ ಜೀವನ ಉಳಿಸಲು ಬಡಿದಾಡುತ್ತಿದ್ದೇವೆ ಎಂದರು.
ಕಲ್ಯಾಣವೆಂದರೆ ಬೊಮ್ಮಾಯಿಗೆ ದ್ವೇಷ. ರಾಜ್ಯದಲ್ಲಿ ಬಿಜೆಪಿ ಸರಕಾರ ಭೇದ, ಭಾವ ಮೂಡಿಸಿ ಜನರನ್ನು ಗೊಂದಲಕ್ಕೆ ಕೆಡವಿ ರಾಜ್ಯಭಾರ ಮಾಡುತ್ತಿದೆ. ಇನ್ನೊಂದೆಡೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕಲ್ಯಾಣ ಕರ್ನಾಟಕವೆಂದರೆ ಬಹಳ ಸಿಟ್ಟಿದೆ, ದ್ವೇಷವೂ ಇದೆ ಎಂದು ಅವರು ಆರೋಪಿಸಿದರು.
Related Articles
ಬೊಮ್ಮಾಯಿ ಅವರಿಗೆ ಕಲ್ಯಾಣದಲ್ಲಿ ಬಿಜೆಪಿ ಕ್ಷೇತ್ರಗಳು ಹೆಚ್ಚಿದ್ದರೇ ಅವರು ಸರಿಯಾಗಿ ಅನುದಾನ ಹಂಚಿಕೆ ಮಾಡುತ್ತಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಹೆಚ್ಚಿರುವ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲವಾದ್ದರಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಆರೋಪಿಸಿದ ಅವರು, ಈ ಭಾಗದ ಸಮಗ್ರ ವಿಕಾಸಕ್ಕೆ 371 ಜೆ ಕಲಂ ಜಾರಿ ವೇಳೆಯಲ್ಲೂ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರೇ ವಿರೋಧಿಸಿದ್ದರು. ಆದ್ದರಿಂದ ಬಿಜೆಪಿಯ ಈಗಿನ ಸಿಎಂ, ಸಚಿವರಿಂದ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ನಿಂದ 371 ಜೆ ಕಲಂ
ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಯ ಕನಸು ಕಂಡವರು ದಿ. ಧರ್ಮಸಿಂಗ್ ಮತ್ತು ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು. ಅವರಿಲ್ಲದೆ ಹೋಗಿದ್ದರೆ ಎಲ್ಲ ಪಕ್ಷಗಳನ್ನು ಒಂದು ಮಾಡಿ ಮತಗಳನ್ನು ಪಡೆಯದೇ ಹೋಗಿದ್ದರೆ ಸಂಸತ್ತಿನಲ್ಲಿ 371 ಜೆ ಕಲಂ ತಿದ್ದುಪಡಿ ಮಸೂದೆ ಬಿದ್ದು ಹೋಗುತ್ತಿತ್ತು. ಆದರೆ, ಅದನ್ನು ಉಳಿಸಿಕೊಂಡಿದ್ದು ಖರ್ಗೆ ಅವರು ಎನ್ನುವುದು ನಮ್ಮ ಹೆಮ್ಮೆ ಎಂದ ಅವರು, ಈ ಭಾಗದಲ್ಲಿ ದೊಡ್ಡ ದೊಡ್ಡ ಯೋಜನೆಗಳು ತಂದದ್ದು ಕಾಂಗ್ರೆಸ್ ಎಂದರು.
ಪ್ರಧಾನಿ ರಾವಣ; ಸಮರ್ಥನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾವಣ ಎಂದು ಕರೆದಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಹೌದು.. ಈ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಹಸಿವು, ಅಡುಗೆ ಅನಿಲ, ಪೆಟ್ರೋಲ್ ಸೇರಿದಂತೆ ಎಲ್ಲವನ್ನು ಏರಿಕೆ ಮಾಡಿರುವುದು ರಾವಣನಂತಾಗಿದೆ. ಇದರಿಂದಾಗಿ ಬಡ ಜನರಿಗೆ ಒಂದೊಪ್ಪತ್ತಿನ ಅನ್ನ ಸಿಗುತ್ತಿಲ್ಲ ಇದು ರಾವಣ ಪ್ರಹಾರ. ಆದ್ದರಿಂದ ರಾವಣ ಅಚ್ಚೇ ದಿನಗಳಿಗಿಂತ ನಮಗೆ ಹಳೆಯ ನಮ್ಮ ದಿನಗಳನ್ನೇ ಪಾಪಸ್ಸು ಕೊಡಲಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸಮರ್ಥನೆ ಮಾಡಿದರು.
ಡಿ.ಕೆ.ಶಿವಕುಮಾರ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ, ಶೀಧರಬಾಬು, ಡಾ. ಅಜಯಸಿಂಗ್ ಇನ್ನೂ ಹಲವರು ಇದ್ದರು.