ಕೊಪ್ಪಳ: ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಪೂರ್ವ ಸಿದ್ಧತೆಯಿಲ್ಲದೆ ಮೋದಿ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಸೋಂಕಿತರ ಸಂಖ್ಯೆ ಕಡಿಮೆಯಿದ್ದಾಗ ಬಿಗಿ ಮಾಡಿ, ಸೋಂಕಿತರ ಸಂಖ್ಯೆ ಹೆಚ್ಚಾದಾಗ ಲಾಕ್‌ಡೌನ್ ತೆರೆಯಲಾಗಿದೆ. ಹೀಗಾಗಿ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ವೇಳೆ 65 ದಿನಗಳ ಕಾಲ ಸರ್ಕಾರ ಕೃಷಿ, ಕೂಲಿ, ಕಾರ್ಮಿಕರ, ಬೀದಿ ವ್ಯಾಪಾರಸ್ಥರ ಬಗ್ಗೆ ಅಮಾನವೀಯವಾಗಿ ವರ್ತಿಸಿದೆ. ಕಾಂಗ್ರೆಸ್ ನಾಯಕರು ಕೊರೊನಾ ಬಗ್ಗೆ ಮೊದಲೇ ಎಚ್ಚರಿಸಿದರೂ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಲಾಕ್‌ಡೌನ್ ವೇಳೆ ನೂರಾರು ಕಿಮೀ ನಡೆದ ಕಾರ್ಮಿಕರು, ಮಹಿಳೆಯರು, ಗರ್ಭಿಣಿಯರ ಬಗ್ಗೆ ಕನಿಕರ ತೋರಲಿಲ್ಲ. ದಾರಿ ಮಧ್ಯೆ ಸಾವು ಸಂಭವಿಸಿದವು. ಇದಕ್ಕೆಲ್ಲ ಯಾರು ಕಾರಣ ಎಂದು ಪ್ರಶ್ನಿಸಿದರು. ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.
ಅದು ಅಂಗೈಯಲ್ಲಿ ಅರಮನೆ ತೋರಿಸಿದ ಹಾಗಿದೆ. ಏಲ್ಲಿದೆ ಪ್ಯಾಕೇಜ್? ಯಾರಿಗೆ ತಲುಪಿದೆ? ಯಾರಿಗೆ ಲಾಭ ಆಗಿದೆ? ಪ್ಯಾಕೇಜ್‌ನಲ್ಲಿ ಏನೂ ಹುರುಳಿಲ್ಲ. ಜನರಿಗೆ ಮೋಸ ಮಾಡುತ್ತಿದ್ದೀರಿ. ಜನರಿಗೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದೆಲ್ಲವನ್ನೂ ನೋಡಿಯೇ ಸೋನಿಯಾ ಗಾಂಧಿ ಅವರು ಭಾರತದ ರಕ್ಷಣೆಗೆ ಜನತೆಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದರು.
ಈಚೆಗೆ ಪಿಪಿಇ ಕಿಟ್ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ದೂರುಗಳು ಬಂದಿವೆ. ಉಮೇಶ ಕತ್ತಿ, ಮುರಗೇಶ ನಿರಾಣಿ ಸೇರಿ ಇತರೆ ನಾಯಕರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಪರಿಶೀಲನೆಗೆ ಮುಂದಾದರೆ, ಸ್ಪೀಕರ್ ಕೋವಿಡ್ ನೆಪದಿಂದಾಗಿ ತಡೆಯಾಜ್ಞೆ ನೀಡಿದ್ದಾರೆ. ತೆರಿಗೆ ಹಣ ಲೆಕ್ಕ ಇಡಬೇಕು. ಸಮಿತಿಯು ಪಕ್ಷಾತೀತವಾಗಿದೆ. ಅದಕ್ಕೆ ಕಿಟ್ ಖರೀದಿಯ ಪರಿಶೀಲನೆಗೆ ಅನುಮತಿ ಕೊಟ್ಟು, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.
ಬಿಜೆಪಿ ಅತೃಪ್ತಿಯ ಕಿತ್ತಾಟವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಇನ್ನು ರಮೇಶ ಜಾರಕಿಹೊಳಿ ಅವರಿಗೆ ಗಾಳಿಯಲ್ಲಿ ಮಾತನಾಡುವ ಚಾಳಿಯಿದೆ. ಅವರೇ ಬಿಜೆಪಿಯಲ್ಲಿ ತೃಪ್ತಿಯಿಂದ ಇದ್ದಾರಾ? ಎಂದು ಆತ್ಮಸಾಕ್ಷಿಯಿಂದ ಹೇಳಲಿ. ಬಹುಪಾಲು ಸಚಿವರು ಆಯಾ ಜಿಲ್ಲೆಗಳಿಗೆ ಹೋಗಿಲ್ಲ. ಇದನ್ನು ಜನತೆ ನೋಡುತ್ತಿದ್ದಾರೆ ಎಂದರಲ್ಲದೆ, ಗ್ರಾಪಂಗೆ ನಾಮನಿರ್ದೇಶನ ಮಾಡಲು ನಮ್ಮ ವಿರೋಧ ಇದೆ. ಅದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ಮೋದಿ ಸರ್ಕಾರ ಸಾಧನೆಯ ಸಂಭ್ರಮ ಎನ್ನುತ್ತಿದೆ. ಅವರದ್ದು ಶೂನ್ಯ ಸಾಧನೆ, ಏನೂ ಸಾಧನೆ ಮಾಡಿಲ್ಲ. ಜೂ. 7ರಂದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸರಳವಾಗಿ ನಡೆಯಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ನಾಪೂರ, ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಶಿವರಾಮೆಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.