Advertisement

ಕೇಂದ್ರ ಸರ್ಕಾರ ಸರಿಸಮಾನ ವೇತನ ನೀಡಲು ಆಗ್ರಹ

06:05 PM Jan 11, 2022 | Team Udayavani |

ಕಾರಟಗಿ: ಕೇಂದ್ರ ಸರ್ಕಾರದ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಯನ್ನು ರಾಜ್ಯ ಸರ್ಕಾರದ ನೌಕರರಿಗೂ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕ ಬಸವರಾಜ ದಢೇಸುಗೂರು ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ್‌ ಜುಮ್ಮಣ್ಣನವರ್‌ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ಭಾರಿ ವ್ಯತ್ಯಾಸವಿದೆ. ಒಂದೇ ಸ್ಥಳದಲ್ಲಿಒಂದೇ ಕೆಲಸ ಮಾಡುವ ನೌಕರರ ನಡುವೆ ವೇತನ ವ್ಯತ್ಯಾಸ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.

ಹಳೆ ಪಿಂಚಣಿ ಇರಲಿ: ನೂತನ ಪಿಂಚಣಿ ಯೋಜನೆ ನೌಕರರಿಗೆ ಮಾರಕವಾಗಿದೆ. ರಾಜ್ಯದಲ್ಲಿ ಎನ್‌ಪಿಎಸ್‌ಗೆ ಒಳಪಡುವ 2.40 ಲಕ್ಷ ನೌಕರರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ನೂತನ ಪಿಂಚಣಿ ಯೋಜನೆ ರದ್ದುಪಡಿಸಬೇಕು. ಹಿಂದಿನಂತೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರಲ್ಲದೇ ಶಿಕ್ಷಣ ಇಲಾಖೆಯ ಎಲ್ಲ ವೃಂದಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರ ತಿದ್ದುಪಡಿ ಮಾಡಿ ಶೀಘ್ರ ಅನುಷ್ಠಾನಗೊಳಿಸಬೇಕು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅನುಭವ ಮತ್ತು ವಿದ್ಯಾರ್ಹತೆಯನ್ನು ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೇ ಪದೋನ್ನತಿ ನೀಡಬೇಕು ಎಂದರು.

ನಂತರ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸರ್ಧಾರ ಅಲಿ ಮಾತನಾಡಿ, ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ಅವರೆಲ್ಲರಿಗೆ ತಾಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ನೌಕರರ ಭವನದ ಕೊರತೆಯಿದೆ. ಸರ್ಕಾರವೇನೋ 10 ಗುಂಟೆ ಜಮೀನು ಮಂಜೂರು ಮಾಡಿದೆ. ಆದರೆ ಅಷ್ಟು ಶುಲ್ಕ ಭರಿಸಲು ನಮ್ಮಿಂದ ಸಾಧ್ಯವಿಲ್ಲ.

ಕೂಡಲೇ ಶಾಸಕರು 40 ಮತ್ತು 60 ಅಡಿ ಜಾಗೆ ಮಂಜೂರು ಮಾಡಿಸಿ ಭವನಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೊಂಡರು. ಸಂಘಕ್ಕೆ ಒಂದು ಸ್ವಂತ ಕಟ್ಟಡವಿದ್ದರೆ ಅಲ್ಲಿ ವಾಚನಾಲಯ ಹಾಗೂ ಸಭೆ, ಸಮಾರಂಭ ಮಾಡಲು ಅನುಕೂಲವಾಗುತ್ತದೆ ಎಂದರು.

Advertisement

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಸುಶೀಲೇಂದ್ರರಾವ್‌, ಜಿಲ್ಲಾ ಕಾರ್ಯಾಧ್ಯಕ್ಷ ಶಿವಪ್ಪ ಜೋಗಿನ್‌, ಜಿಲ್ಲಾ ಖಜಾಂಚಿ ದೇಶಪಾಂಡೆ, ಜಿಲ್ಲಾ ನಿರ್ದೇಶಕ ಮಾರುತಿ ಮಂಗಳಾಪುರ, ಗೋಪಾಲ, ತಾಲೂಕು ಕಾರ್ಯದರ್ಶಿ ತಿಮ್ಮಣ್ಣ ನಾಯಕ್‌, ಗೌರವಾಧ್ಯಕ್ಷ ಶಶಿಧರಸ್ವಾಮಿ, ಉಪಾಧ್ಯಕ್ಷರಾದ ಶಂಕ್ರಮ್ಮ, ಕನಕಪ್ಪ ನಾಯಕ್‌, ರಮೇಶ ಇಲ್ಲೂರು, ಖಜಾಂಚಿ ಯಂಕೋಬ, ಶ್ಯಾಮಸುಂದರ್‌, ಗಂಗಪ್ಪ ಹಾಸ್ಟೆಲ್‌, ವೀರನಗೌಡ ಹಣವಾಳ, ಶರಣಪ್ಪ ಗೌರಿಪುರ, ಶ್ರೀಕಾಂತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ್‌, ದ್ಯಾಮಣ್ಣ ಬೆನಕಟ್ಟಿ, ಜಿಲ್ಲಾ ಖಜಾಂಚಿ ಪರುಶರಾಮ ಗಡ್ಡಿ, ನಿರ್ದೇಶಕರಾದ ಅಮರಮ್ಮ, ನಾಗರತ್ನ, ಮಹಾಂತಮ್ಮ ಮೇಟಿ, ರಾಜೇಶ ಕೊಟಬಾಗಿ, ಕೀರು ಪವಾರ್‌, ಎನ್‌ಪಿಎಸ್‌ ಅಧ್ಯಕ್ಷ ಮಲ್ಲೇಶ ನಾಯಕ್‌ ಸೇರಿ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next