ನವದೆಹಲಿ: ಮತಾಂತರಗೊಂಡ ಪರಿಶಿಷ್ಟ ಪಂಗಡದವರಿಗೆ ಕೂಡ ಎಸ್‌ಸಿ ಮಾನ್ಯತೆ ನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅದರ ನೇತೃತ್ವ ವಹಿಸಲಿದ್ದಾರೆ.
ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ 1950ರಲ್ಲಿ ಉಲ್ಲೇಖಗೊಂಡಿರುವ ಪ್ರಕಾರ ಹಿಂದೂ ಅಥವಾ ಸಿಖ್, ಬೌದ್ಧ ಧರ್ಮಕ್ಕೆ ಸೇರದೇ ಇರುವವರನ್ನು ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗದವರು ಎಂದು ಪರಿಗಣಿಸಲಾಗದು.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜೆ.ಬಾಲಕೃಷ್ಣನ್ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ರವೀಂದ್ರ ಕುಮಾರ್ ಜೈನ್, ಯುಜಿಸಿ ಸದಸ್ಯೆ ಸುಷ್ಮಾ ಯಾದವ್ ಇರಲಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವಾಲಯ ಹೇಳಿದೆ.
ಮೂವರು ಸದಸ್ಯರು ಇರುವ ಸಮಿತಿ ಹೊಸತಾಗಿ ಎಸ್‌ಸಿ ಸಮುದಾಯದಲ್ಲಿದ್ದು ಮತಾಂತರಗೊಂಡವರಿಗೆ ಅದೇ ಮಾನ್ಯತೆ ನೀಡಬಹುದೇ, ಒಂದು ವೇಳೆ ಅಂಥ ಮಾನ್ಯತೆ ನೀಡಿದರೆ ಸಾಮಾಜಿಕವಾಗಿ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ.
ಸದ್ಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಕೂಡ ಎಸ್‌ಸಿ ಮಾನ್ಯತೆ ನೀಡಬೇಕು ಎಂದು ಬೇಡಿಕೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ಒಂದು ವೇಳೆ ಇಂಥ ಮಾನ್ಯತೆ ನೀಡಿದರೆ, ಬದಲಾದ ಸ್ಥಿತಿಯಲ್ಲಿ ಅವರು ಹೊಸ ಮತದಲ್ಲಿ ಅನುಸರಿಸುವ ಪದ್ಧತಿ, ಸಂಪ್ರದಾಯಗಳ ಮೇಲೆ ಯಾವ ರೀತಿಯ ಪರಿಣಾಮ, ಸಮಾಜದಲ್ಲಿ ಅವರ ಮೇಲೆ ಉಂಟಾಗುವ ಪರಿಣಾಮಗಳ ಸೇರಿದಂತೆ ಹಲವು ಅಂಶಗಳ ಮೇಲೆ ಅಧ್ಯಯನ ನಡೆಸಲಿದೆ.