ಬೆಂಗಳೂರು: ಮಹಾ ಮಾರಣಾಂತಿಕ ಕೋವಿಡ್ 19 ವೈರಾಣು ತಡೆಗೆ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವ ಜತೆಗೆ ವಿಶ್ವದ ಅತಿದೊಡ್ಡ ಆರ್ಥಿಕ ಪರಿಹಾರ ಯೋಜನೆಯನ್ನು ಘೋಷಣೆ ಮಾಡಿದ ಕೇಂದ್ರ ಸರ್ಕಾರದ ಕ್ರಮ ಅಭಿನಂದನೀಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೋವಿಡ್ 19 ಸೋಂಕಿನ ತಡೆಗೆ ಕೇಂದ್ರ ಸರ್ಕಾರ ಸಾಕಷ್ಟು ದಿಟ್ಟ ಕ್ರಮ ಕೈಗೊಂಡಿದ್ದು , ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ನೌಕರ, ಕಾರ್ಮಿಕ, ರೈತ, ಉದ್ಯೋಗಸ್ಥರು ಹಾಗೂ ವಿಶೇಷವಾಗಿ ಮಹಿಳೆಯರಿಗೆ 1.7 ಲಕ್ಷ ಕೋಟಿ ರೂ. ಆರ್ಥಿಕ ಪರಿಹಾರ ಯೋಜನೆಯನ್ನು ಘೋಷಿಸಿದೆ.
ಇದರಲ್ಲಿ ಬಡವರ ಹಸಿವಿನ ಅರ್ಥ ಅರಿತುಕೊಂಡ ಸರ್ಕಾರವು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ. ಹೆಚ್ಚುವರಿ ಗೋಧಿ ಅಥವಾ ಅಕ್ಕಿ ಮತ್ತು ಒಂದು ಕೆ.ಜಿ. ಬೇಳೆ ವಿತರಿಸಲು ನಿರ್ಧರಿಸಿದೆ. ಹಾಗೆಯೇ ಮಹಿಳೆಯರ ಜನಧನ್ ಖಾತೆಗೆ ಪ್ರತಿ ತಿಂಗಳು 500 ರೂ.ನಂತೆ ಮೂರು ತಿಂಗಳಿಗೆ 1,500 ರೂ. ಮುಂಗಡವಾಗಿ ನೇರ ಹಣ ವರ್ಗಾವಣೆ ಮಾಡುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮತ್ತು ಪೌರ ಕಾರ್ಮಿಕರಿಗೆ ವಿಮಾ ಯೋಜನೆ, ನರೇಗಾ ಯೋಜನೆಗೆ ಹೆಚ್ಚುವರಿ ಹಣ, ಜನಧನ್ ಖಾತೆ ಮೂಲಕ ನೇರ ಹಣ ವರ್ಗಾವಣೆ ಜಾರಿಗೊಳಿಸಿರುವುದು ಹಾಗೂ ಅನೇಕ ವಿಷಯಗಳಲ್ಲಿ ಆದ್ಯತಾ ವಲಯಗಳನ್ನು ಗುರುತಿಸಿ ವಿಶ್ವದ ಅತಿ ದೊಡ್ಡ ಆರ್ಥಿಕ ಪರಿಹಾರ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಆರ್ಥಿಕ ತಂಡಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವಲ್ಲಿ ನಾವೆಲ್ಲರೂ ಮನೆಯಲ್ಲೇ ಇರುವುದರ ಮೂಲಕ ನಮ್ಮ ಲಕ್ಷ್ಮಣ ರೇಖೆ ದಾಟಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.