ಕಲಬುರಗಿ: ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಅಧ್ಯಯನಗೈಯಲು ಕೇಂದ್ರದಿಂದ ಮೂರು ತಂಡಗಳು ಆಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿಭಾಗೀಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 195 ತಾಲೂಕುಗಳನ್ನು ಬರಗಾಲ ಎಂದು ಘೋಷಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ ಹಿನ್ನೆಲೆಯಲ್ಲಿ ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಬರ ಅಧ್ಯಯನ ತಂಡಗಳನ್ನು ಕಳುಹಿಸುವುದಾಗಿ ಮಾಹಿತಿ ಕಳುಹಿಸಿದೆ. ಇದೇ ಅಕ್ಟೋಬರ್ 10 ರೊಳಗೆ ತಂಡಗಳು ಆಗಮಿಸಲಿವೆ ಎಂದು ಕೃಷಿ ಸಚಿವರು ತಿಳಿಸಿದರು.
ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ಪರಿಸ್ಥಿತಿವಿದೆ. ಹೆಚ್ಚಿನ ಪ್ರಮಾಣದಲ್ಲಿ ಬರಗಾಲವಿದೆ. ಬೆಳೆ ಹಾನಿ ಸಮೀಕ್ಷೆ ನಡೆದಿದ್ದು, ಈಗಾಗಲೇ ಶೇ. 80 ರಿಂದ 90 ರಷ್ಟು ಬೆಳೆ ಹಾನಿ ಸಮೀಕ್ಷೆಯಾಗಿದೆ. ತಂಡಗಳು ಆಗಮಿಸುವ ಹೊತ್ತಿಗೆ ಸಮೀಕ್ಷೆ ಪೂರ್ಣಗೊಂಡು ವರದಿ ಅಂತೀಮಗೊಳ್ಳಲಿದೆ. ಪ್ರಾಥಮಿಕ ವರದಿ ಪ್ರಕಾರ ಈಗಾಗಲೇ 40 ಲಕ್ಷ ಹೆಕ್ಟೇರ್ ದಲ್ಲಿ ಸುಮಾರು 28 ಸಾವಿರ ಕೋ.ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿವರಣೆ ನೀಡಿದರು.
ಬೆಳೆವಿಮೆ ಮಾರ್ಪಾಡು: ಬೆಳೆವಿಮೆಯನ್ನು ಈಗ ಖಾಸಗಿ ಕಂಪನಿಯೇ ಉಸ್ತುವಾರಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ ಎಂಬುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲಿನಂತೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಬೆಳೆ ವಿಮೆ ನಿರ್ವಹಿಸಲು ಚಿಂತನೆ ನಡೆದಿದೆ ಎಂದು ಸಚಿವ ಚಲುವರಾಯ ಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕೃಷಿ ಹೊಂಡ ಮತ್ತೆ ಜಾರಿಗೆ: ಕೃಷಿ ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸೂಚಿಸಲಾಗಿದೆ. ಕೃಷಿ ಹೊಂಡ ನಿರ್ಮಾಣ ಯೋಜನೆ ಮತ್ತೆ ಜಾರಿಗೆ ತರಲಾಗಿದೆ. ರೈತರ ಮಕ್ಕಳಿಗೆ ನೀಡಲಾಗುವ ವಿದ್ಯಾನಿಧಿ ಮುಂದುವರೆಸಲಾಗಿದೆ. ಆದರೆ ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಜತೆಗೆ ರಾಜ್ಯದಿಂದ ನೀಡಲಾಗುತ್ತಿದ್ದ 4000 ರೂ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು ಉಪಸ್ಥಿತರಿದ್ದರು.