Advertisement

ರಾಜ್ಯದಲ್ಲಿ ಕೋವಿಡ್‌ ಹೆಚ್ಚಳಕ್ಕೆ ಕೇಂದ್ರ ಕಳವಳ; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

08:57 PM Aug 06, 2022 | Team Udayavani |

ಬೆಂಗಳೂರು: ಒಂದು ತಿಂಗಳಿನಲ್ಲಿ ರಾಜ್ಯದಲ್ಲಿ 41 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ದಿನವೊಂದರ ಪಾಸಿಟಿವ್‌ ದರ ಶೇ.6.32ಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

Advertisement

ರಾಜ್ಯದಲ್ಲಿ ದಿನವೊಂದಕ್ಕೆ ಸರಾಸರಿ 1,992 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 10.1ರಷ್ಟು ಪ್ರಕರಣಗಳು ರಾಜ್ಯದಿಂದ ವರದಿಯಾಗುತ್ತಿವೆ. ವಾರವೊಂದಕ್ಕೆ ಕೊರೊನಾ ಹೊಸ ಪ್ರಕರಣಗಳಲ್ಲಿ 1.28 ಪಟ್ಟು ಏರಿಕೆ ಕಂಡು ಬರುತ್ತಿದೆ. ಮುಂದಿನ ದಿನದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಜಿಲ್ಲೆಗಳಲ್ಲಿ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಐಎಲ್‌ಐ ಹಾಗೂ ಸಾರಿ ಪ್ರಕರಣಗಳತ್ತ ಹೆಚ್ಚಿನ ಗಮನ ಹರಿಸಬೇಕು. ಕೊರೊನಾ ರೂಪಾಂತರಿ ಪತ್ತೆಗೆ ಅಂತಾರಾಷ್ಟ್ರೀಯ ಪಾಸಿಟಿವ್‌ ವರದಿಯಾದ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಕೊರೊನಾ ಪ್ರಕರಣಗಳನ್ನು ನಿಯಮಾನುಸಾರ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸುವಂತೆ ನಿರ್ದೇಶಿಸಿದೆ. ಜತೆಗೆ ಸಾರ್ವಜನಿಕ ಸ್ಥಳ, ವಾಹನಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸಲು ಆದೇಶಿಸಿದೆ.

ಪರೀಕ್ಷೆ ಹೆಚ್ಚಳಕ್ಕೆ ಆದೇಶ
ರಾಜ್ಯದಲ್ಲಿ ಒಮಿಕ್ರಾನ್‌ ಬಳಿಕ ಕೊರೊನಾ ಪರೀಕ್ಷೆಯನ್ನು ಕಡಿತಗೊಳಿಸಲಾಗಿದೆ. ಈ ಹಿಂದೆ ದಿನವೊಂದಕ್ಕೆ ಸರಾಸರಿ 50,000ರಿಂದ 70,000 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಕಳೆದೊಂದು ತಿಂಗಳಿನಿಂದ 8 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದು ದಿನವೊಂದಕ್ಕೆ ಸರಾಸರಿ 25,000ರಷ್ಟಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕು ಪತ್ತೆಗೆ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಸಕ್ರಿಯ ಪ್ರಕರಣ ಹೆಚ್ಚಳ
ದೇಶದಲ್ಲಿ ಒಟ್ಟು 1.34 ಲಕ್ಷ ಕೊರೊನಾ ಪಾಸಿಟಿವ್‌ ಪ್ರಕರಣಗಳಿವೆ. ಕಳೆದೊಂದು ತಿಂಗಳಿನಿಂದ ಅತ್ಯಧಿಕ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಮಹಾರಾಷ್ಟ್ರ, ಕೇರಳದ ಬಳಿಕ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ 11,786 ಸಕ್ರಿಯ ಪ್ರಕರಣಗಳಿದ್ದು, ಸಕ್ರಿಯ ಸೋಂಕಿನ ದರ ಶೇ. 0.28 ಹಾಗೂ ಮರಣ ಪ್ರಮಾಣವು ಶೇ.1ರಷ್ಟು ವರದಿಯಾಗಿದೆ.

Advertisement

14 ಜಿಲ್ಲೆಯಲ್ಲಿ ಪ್ರಕರಣ ಏರಿಕೆ
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಶೇ.5ಕ್ಕಿಂತ ಅಧಿಕ ಕೋವಿಡ್‌ ಪಾಸಿಟಿವ್‌ ದರ ಪಟ್ಟಿಯಲ್ಲಿ ಬೆಂಗಳೂರು ನಗರ ಶೇ.9.55 ಸಹಿತ ರಾಜ್ಯದ 14 ಜಿಲ್ಲೆಗಳು ಸೇರ್ಪಡೆಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಇದೆ. ತಿಂಗಳ ಹಿಂದೆ ಬೆರಳೆಣಿಕೆ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಯಲ್ಲಿ ಸಹ 100ಕ್ಕಿಂತ ಅಧಿಕ ಪ್ರಕರಣ ವರದಿಯಾಗುತ್ತಿರುವುದು ಆತಂಕ ವ್ಯಕ್ತವಾಗಿದೆ.

ಉಪತಳಿ ಹೆಚ್ಚಳ
ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಆಯ್ದ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತಿದೆ. ಕಳೆದೊಂದು ತಿಂಗಳಲ್ಲಿ ಸುಮಾರು 920 ಮಾದರಿಗಳಲ್ಲಿ ಕೋವಿಡ್‌ ಉಪತಳಿಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next