Advertisement

ಕೇಂದ್ರದ ಮಲತಾಯಿ ಧೋರಣೆ: ಪರಮೇಶ್ವರ್‌

06:15 AM Aug 25, 2018 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪದಿಂದ ನಲುಕಿರುವ ಕೇರಳಕ್ಕೆ ವಿಶೇಷ ನೆರವು ನೀಡಿರುವ ಕೇಂದ್ರ ಸರ್ಕಾರ ಅದೇ ರೀತಿ ಹಾನಿಗೊಳಗಾಗಿರುವ ರಾಜ್ಯದ ಕೊಡಗಿಗೆ ಯಾವುದೇ ನೆರವು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ವಿಕಾಸಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ವಿಮಾನವನ್ನು ಕೊಡಗಿನ ಕಡೆಗೆ ತಿರುಗಿಸಿ ಪರಿಶೀಲಿಸಬಹುದಿತ್ತು. ಆದರೆ ಪ್ರಧಾನಿಯವರಿಗೆ ಮಡಿಕೇರಿ ಸಂತ್ರಸ್ತರು ಕಾಣಲೇ ಇಲ್ಲ. ಯಾವ ಉದ್ದೇಶಕ್ಕೆ ಪ್ರಧಾನಿಯವರು ಆ ರೀತಿ ನಡೆದುಕೊಂಡರೋ ಗೊತ್ತಾಗುತ್ತಿಲ್ಲ. ನೆರವು ಕೊಡುವುದಿರಲಿ ಸಂತ್ರಸ್ತ ಜನರಿಗೆ ಕೇಂದ್ರ ಸರ್ಕಾರ ತಮ್ಮೊಂದಿಗಿದೆ ಎಂಬ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಲಿಲ್ಲ. ಶುಕ್ರವಾರ ರಕ್ಷಣಾ ಸಚಿವರು ಪರಿಶೀಲನೆ ನಡೆಸಿದಂತಿದೆ ಎಂದು ಕಿಡಿ ಕಾರಿದರು.

ಬೆಳೆ ನಷ್ಟ, ರಸ್ತೆ, ಸೇತುವೆ, ಮೂಲ ಸೌಕರ್ಯ ವ್ಯವಸ್ಥೆಗೆ ಉಂಟಾಗಿರುವ ಹಾನಿ ಪ್ರಮಾಣದ ಸಮೀಕ್ಷೆ ಪ್ರಕ್ರಿಯೆ ನಡೆದಿದ್ದು, ಪೂರ್ಣಗೊಂಡ ನಂತರ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಕೇರಳ ಸರ್ಕಾರ ಪ್ರಸ್ತಾವ ಸಲ್ಲಿಸದಿದ್ದರೂ ಕೇಂದ್ರ ಸರ್ಕಾರ ವಿಶೇಷ ನೆರವು ನೀಡಿದೆ. ಅದರಂತೆ ಕೊಡಗಿಗೂ ನೆರವು ನೀಡಬಹುದಿತ್ತು. ಇದು ಕೇಂದ್ರದ ಮಲತಾಯಿ ಧೋರಣೆಯನ್ನು ತೋರಿಸುತ್ತದೆ ಎಂದು ಹೇಳಿದರು.ಪರಿಹಾರ ಸಾಮಗ್ರಿಗಳು ಎಲ್ಲಿಯೂ ಕಳುವಾಗಿರುವ ಬಗ್ಗೆ ವರದಿಯಾಗಿಲ್ಲ. 

ಕೊಡಗಿನಲ್ಲಿ ಬಹಳಷ್ಟು ಹಾನಿಯಾಗಿರುವುದರಿಂದ ಪರಿಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಸೂಕ್ತ ಸ್ಥಳಾವಕಾಶವಿಲ್ಲ. ಹಾಗಾಗಿ ಮೈಸೂರಿನಲ್ಲೇ ಪರಿಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡು ಕೋರಿಕೆಗೆ ಅನುಗುಣವಾಗಿ ವಿತರಿಸುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೊಡಗು ಮರು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಿದೆ. ಕೊಡಗಿನಲ್ಲಿ ಉಂಟಾಗಿರುವ ಅನಾಹುತಗಳು, ಹಾನಿ ಸರಿಪಡಿಸಿ ಪುನರ್‌ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Advertisement

ಠಾಣೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿಲ್ಲ, ಠಾಣೆಗೆ ಬರುವವರಿಗೆ ಪೊಲೀಸರು ಸರಿಯಾಗಿ ಮಾಹಿತಿ ನೀಡುವುದಿಲ್ಲ ಎಂಬುದು ಸೇರಿದಂತೆ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖೀಸಿರುವ ಅಂಶಗಳನ್ನು ಕುರಿತಂತೆ ಈಗಾಗಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಒಂದೊಮ್ಮೆ ಆ ರೀತಿಯ ಪರಿಸ್ಥಿತಿಯಿದ್ದರೆ ತಕ್ಷಣವೇ ಸರಿಪಡಿಸಿಕೊಂಡು ಅಗತ್ಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವತ್ತ ಗಮನ ಹರಿಸಲಾಗುವುದು.
– ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next