Advertisement

ಪ್ರವಾಸೋದ್ಯಮ ವರ್ತುಲ ಸ್ಥಾಪನೆಗೆ ಕೇಂದ್ರದ ಅನುಮತಿ

11:32 AM Feb 17, 2019 | |

ಶಿವಮೊಗ್ಗ: ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮೂರು ಜಿಲ್ಲೆಗಳನ್ನು ಒಳಗೊಂಡ ಪ್ರವಾಸೋದ್ಯಮ ವರ್ತುಲವನ್ನು (ಟೂರಿಸಂ ಸರ್ಕ್ನೂಟ್‌)ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

 ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಈ ಮೂರು ಜಿಲ್ಲೆಗಳನ್ನು ಸೇರಿಸಿ, ಈ ಟೂರಿಸಂ ಸರ್ಕ್ನೂಟನ್ನು ನಿರ್ಮಿಸಲಾಗುತ್ತಿದ್ದು, “ಸ್ವದೇಶಿ ದರ್ಶನ್‌’ ಹೆಸರಿನಲ್ಲಿ ಮೂರು ಜಿಲ್ಲೆಗಳಲ್ಲಿರುವ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಈಗಾಗಲೇ ಇರುವ ಪ್ರವಾಸಿ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳು ಸೇರಿದಂತೆ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ಇದರ ಜೊತೆಗೆ ಸೊರಬದ ಚಂದ್ರಗುತ್ತಿ ದೇವಾಲಯದ ಜೀರ್ಣೋದ್ಧಾರ, ಸೊರಬ ತಾಲೂಕಿನ ಗುಡವಿ ಪಕ್ಷಿಧಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಹರ್ಷವರ್ಧನ್‌ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಕೇಂದ್ರ ಮೃಗಾಲಯ ಪ್ರಾಧಿಕಾರ (ಸೆಂಟ್ರಲ್‌ ಜ್ಯೂ ಅಥಾರಿಟಿ)ಕ್ಕೆ ಈಗಾಗಲೇ ನಾವು ಹುಲಿ ಮತ್ತು ಸಿಂಹಧಾಮದ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರುವುದು ಸಂತೋಷದ ವಿಷಯ ಎಂದ ಅವರು, ಇದಕ್ಕಾಗಿ ಮಾಸ್ಟರ್‌ ಪ್ಲ್ಯಾನ್‌ ಸಿದ್ಧವಾಗಿದ್ದು, ಸುಮಾರು 40 ಕೋಟಿ ರೂ. ಬಿಡುಗಡೆಯಾಗಲಿದೆ. ಈಗ ಸದ್ಯಕ್ಕೆ ಜಿಂಕೆ, ಹುಲಿ, ಸಿಂಹ ಸಫಾರಿ ಇದೆ. ಮುಂದಿನ ದಿನಗಳಲ್ಲಿ ಕಾಡುಕೋಣ ಸಫಾರಿಯನ್ನು 30 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಲಾಗುವುದು. ಪ್ರಸ್ತುತ ಈ ಹುಲಿ ಸಿಂಹಧಾಮದಲ್ಲಿ 23 ವಿವಿಧ ಜಾತಿಯ 320 ಪ್ರಾಣಿ ಪಕ್ಷಿಗಳಿವೆ. ಅಭಿವೃದ್ಧಿಯಾದರೆ 60 ಜಾತಿಯ ಸುಮಾರು 500ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬರಲಿವೆ. ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯಗಳಂತೆ ಈ ಸಫಾರಿಯನ್ನು ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳವಾದ ಉಡುಗಣಿಯಲ್ಲಿ ಅಕ್ಷರಧಾಮ ಮಾದರಿಯಲ್ಲಿ ಸುಮಾರು 13 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. 12ನೇ ಶತಮಾನದ ಇತಿಹಾಸವನ್ನು ನೆನಪಿಗೆ ತರುವಂತಹ ವಾತಾವರಣವನ್ನು ಅಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಸುಮಾರು 8 ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತದೆ.

ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ವರದಿ ಕಳಿಸಲಾಗಿದೆ. ಕೇಂದ್ರದಿಂದ ಒಪ್ಪಿಗೆಯೂ ದೊರೆತಿದೆ. ಹಣವೂ ಬಿಡುಗಡೆಯಾಗಲಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ನೆರವು
ನೀಡಿದೆ. ಈಗಾಗಲೇ ಎಲ್ಲ ವರದಿಗಳು ತಲುಪಿವೆ. ಹಣ ಕೂಡ ಸದ್ಯದರಲ್ಲಿಯೇ ಬಿಡುಗಡೆಯಾಗಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನದೇ ಆದ ಪ್ರಬಲ್ಯ ಮೆರೆಯಲಿದೆ ಎಂದರು.

Advertisement

ಗೋಷ್ಠಿಯಲ್ಲಿ ಪ್ರಮುಖರಾದ ಎಸ್‌. ರುದ್ರೇಗೌಡ, ಎಸ್‌.ಎನ್‌. ಚನ್ನಬಸಪ್ಪ, ಎನ್‌.ಜೆ. ರಾಜಶೇಖರ್‌, ಬಿಳಕಿ ಕೃಷ್ಣಮೂರ್ತಿ, ಶಿವಣ್ಣ, ಭವಾನಿರಾವ್‌ ಮೋರೆ, ಮಧುಸೂದನ್‌, ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ, ಪದ್ಮಿನಿ, ಜ್ಯೋತಿ ಪ್ರಕಾಶ್‌ ಇದ್ದರು.

ಪಾಕ್‌ ಪ್ರಚೋದಿತ ಉಗ್ರರ ದಾಳಿಯಿಂದಾಗಿ 49 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತಿಯಾಗಿ, ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದೆ. ಆದರೆ, ಕಾಂಗ್ರೆಸ್‌ ನಾಯಕರು ಇದರ ರಾಜಕೀಯ ಲಾಭ ಪಡೆಯಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಯೋಧರ ಸಾವಿನಲ್ಲಿ ರಾಜಕೀಯ ಮಾಡುವುದು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್‌ ನಾಯಕರು ಬಿಡಬೇಕು. ಪಕ್ಷಾತೀತವಾಗಿ ಸಮಸ್ಯೆಯನ್ನು ಎದುರಿಸಲು ಮುಂದಾಗಬೇಕು.
 ಬಿ.ವೈ. ರಾಘವೇಂದ್ರ, ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next