ಹೊಸದಿಲ್ಲಿ: ಬೆಳಗಾವಿ ಹಾಗೂ ಕಲಬುರಗಿಯ ವಿಮಾನ ನಿಲ್ದಾಣಗಳಲ್ಲಿ ತಲಾ ಎರಡು ಹೊಸ ಪೈಲಟ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ತಿಳಿಸಿದ್ದಾರೆ.
ಮುಂದಿನ ನೂರು ದಿನಗಳಲ್ಲಿ ಈ ಎರಡೂ ಕಡೆ ತರಬೇತಿ ಕೇಂದ್ರಗಳು ತಲೆ ಎತ್ತಲಿದ್ದು, ಇವನ್ನು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದೇ ಮುಂದಿನ 100 ದಿನಗಳಲ್ಲಿ ದೇಶದ ಐದು ವಿಮಾನ ನಿಲ್ದಾಣಗಳು, ಆರು ಹೆಲಿಪ್ಯಾಡ್‌ಗಳು ಹಾಗೂ 50 ವಾಯು ಮಾರ್ಗಗಳನ್ನು ಜನಸೇವೆಗೆ ಮುಕ್ತವಾಗಿಸಲು ಕೇಂದ್ರ ಸರ ಕಾ ರ ನಿರ್ಧರಿಸಿದೆ ಎಂದ ಸಿಂಧಿಯಾ, ಸೆ. 15ರಂದು ನಿಗದಿಯಾಗಿರುವ ಏರ್ ಇಂಡಿಯಾ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂಡವಾಳ ಹೂಡಿಕೆಗೆ ಹೊಸ ಹೆಜ್ಜೆ : ದೇಶದ ವಿವಿಧ ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ಗಳಲ್ಲಿ ಸೂಕ್ತ ನಿರ್ವಹಣೆ, ದುರಸ್ತಿ ಹಾಗೂ ಸಮಗ್ರ ಸೇವೆಗಳನ್ನು (ಎಂಆರ್‌ಒ) ಖಾಸಗಿಯವರಿಗೆ ವಹಿಸುವ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಹೆಚ್ಚಿನ ಬಂಡವಾಳ ಆಕರ್ಷಣೆಗೆ ನಿರ್ಧರಿಸಲಾಗಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.
ಏನೇನು ತಿದ್ದುಪಡಿ?: ಎಂಆರ್‌ಒ ಸೇವೆಗಳ ಗುತ್ತಿಗೆ ಪಡೆಯುವ ಕಂಪೆ ನಿಗಳಿಗೆ ಅವಶ್ಯವಿರುವ ಭೂಮಿಯನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಪಡೆಯುವ ಕಂಪೆ ನಿಗಳು ಕಡ್ಡಾಯವಾಗಿ ವಿಮಾನಯಾನ ಪ್ರಾಧಿಕಾರಕ್ಕೆ (ಎಎಐ) ಸಲ್ಲಿಸಬೇಕಿರುವ ರಾಯಧನವನ್ನೂ ರದ್ದುಗೊಳಿಸಲಾಗುತ್ತದೆ. ಇನ್ನು, ಗುತ್ತಿಗೆ ಅವಧಿಯನ್ನು ಈಗಿರುವ 3ರಿಂದ 5 ವರ್ಷಗಳ ವರೆಗೆ ಎಂಬ ನಿಯಮ ತೆಗೆದುಹಾಕಿ 50 ವರ್ಷಗಳ ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.