ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದಿಂದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಈದ್ ಮಿಲನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೋಹತ್ಯೆ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇನೆ. ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯುವವರಿಗೆ ಮಾನವೀಯ ಮೌಲ್ಯಗಳ ಮೇಲೆ ನಂಬಿಕೆ ಇಲ್ಲ. ರಾಜಕೀಯ ಸಂಘಟನೆ ಹೆಸರಲ್ಲಿ ಸಮಾಜದಲ್ಲಿ ಹುಳಿ ಹಿಂಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೆಲವು ಮೂಲಭೂತವಾದಿಗಳು, ಕೋಮುವಾದಿಗಳು ಸಮಾಜವನ್ನು ಹಾಳುವ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಭಾರತೀಯರು ಒಂದೇ ತಾಯಿಯ ಮಕ್ಕಳಂತೆ ಬದುಕುವುದನ್ನು ಕಲಿಯಬೇಕು ಎಂದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಬಿಜೆಪಿಯ ಹಿಂದುತ್ವದ ಹಿಡನ್ ಅಜೆಂಡಾಗಳನ್ನು ಅನುಷ್ಠಾನಗೊಳಿಸಲು ಹೊರಟಿದ್ದಾರೆ. ಬಿಜೆಪಿಯವರ ಕೈಯಲ್ಲಿ ಅಧಿಕಾರ ಇರಬಾರದು. ಜಾತ್ಯತೀತ ತತ್ವ ಉಳಿಸಬೇಕಾದರೆ, ಕೋಮುವಾದಿಗಳನ್ನು ಮಟ್ಟ ಹಾಕಬೇಕು. ಈಗಾಗಲೇ ಬಿಜೆಪಿಯವರು ಕರಾವಳಿ ಭಾಗದಲ್ಲಿ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಸೂಚಿಸಿದ್ದೇನೆ. ಕೆಲವರು ಜಾತ್ಯತೀತ ಹೆಸರಿನಲ್ಲಿ ಬಿಜೆಪಿಯ ಜೊತೆ ಅಧಿಕಾರ ಹಂಚಿಕೊಳ್ಳಲು ಹೋಗುತ್ತಾರೆ. ಅಂತವರನ್ನೂ ಕೂಡ ಚುನಾವಣೆ ಸಂದರ್ಭದಲ್ಲಿ ದೂರ ಇಡಬೇಕು ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಟಾಂಗ್ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಝಾದ್, ನಿಡುಮಾಮಿಡಿ ಮಠದ ವೀರ ಭದ್ರ ಚೆನ್ನಮಲ್ಲ ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹಾಜರಿದ್ದರು.