Advertisement

ಮೀನುಗಾರ ಕಾರ್ಮಿಕರ ಮಕ್ಕಳಿಗೆ ಬೆಳಕಾದ ಶಾಲೆ, ಇಂದು ವಲಸೆ ಕಾರ್ಮಿಕರ ಮಕ್ಕಳಿಗೆ ಜ್ಞಾನ ದೇಗುಲ

09:54 AM Nov 24, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1919 ಶಾಲೆ ಸ್ಥಾಪನೆ
ಫಿಶರೀಸ್‌ ಶಾಲೆ ಎಂದೇ ಪ್ರಸಿದ್ಧಿ ಪಡೆದ ಸ.ಮಾ.ಹಿ.ಪ್ರಾ.ಶಾಲೆ

ಮಲ್ಪೆ: ಮಲ್ಪೆ ಕರಾವಳಿಯಲ್ಲಿ ತಲೆ ಎತ್ತಿದ ಪ್ರಮುಖ ಶಾಲೆಗಳಲ್ಲಿ ಕನ್ನಡ ಬೋರ್ಡ್‌ ಶಾಲೆಯ ನಂತರ ಪ್ರಸಿದ್ದಿ ಪಡೆದದೇ ಮಲ್ಪೆ ಫಿಶರೀಸ್‌ ಶಾಲೆ. ಸ್ಥಾಪನೆಗೆ ಪ್ರಮುಖ ಕಾರಣ ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘ.

1919ರಲ್ಲಿ ಸೋಮಪ್ಪ ಸಾಹುಕಾರ ಮತ್ತು ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಏಳೂರು ಮೊಗವೀರ ಮಹಾಜನ ಸಂಘದ ಕಟ್ಟಡದಲ್ಲಿ ಶಾಲೆಯನ್ನು ಸ್ಥಾಪಿಸಲಾಯಿತು. ಮೀನುಗಾರಿಕೆ ಇಲಾಖೆ ವತಿಯಿಂದ ನಡೆಯುತ್ತಿದ್ದ ಈ ಶಾಲೆ ಫಿಶರೀಸ್‌ ಶಾಲೆ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಅಭಿವೃದ್ಧಿ ಹೊಂದುತ್ತಾ ಹೈಸ್ಕೂಲ್‌ ಆಗಿ ಮಾರ್ಪಟ್ಟಿತ್ತು. ಅನಂತರ ಹೈಸ್ಕೂಲ್‌ ಬೇರೆಯಾಗಿ 1ರಿಂದ 7ನೇ ತರಗತಿಗಳು ಪ್ರಾಥಮಿಕ ಮಾದರಿ ಶಾಲೆಯಾಗಿ ವಿಭಾಗಗೊಂಡಿತು. ಇಂದಿಗೂ ಈ ಶಾಲೆ ಏಳೂರು ಮೊಗವೀರ ಮಹಾಜನ ಸಂಘದ ಕಟ್ಟಡದ ಬಾಡಿಗೆಯಲ್ಲಿದೆ.

ಹಲವು ವ್ಯವಸ್ಥೆಗಳು
1975ನೇ ಎಪ್ರಿಲ್‌ ತಿಂಗಳಲ್ಲಿ ಈ ಶಾಲೆಯು ಮೀನುಗಾರಿಕಾ ಇಲಾಖೆಯಿಂದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಂಡು 1992ರಿಂದ ಪದವೀಧರ ಮುಖ್ಯೋಪಾಧ್ಯಾಯರು ನೇಮಕಗೊಂಡರು. ಅನಂತರ 2001ರಿಂದ ಪದವೀಧರೇತರ ಮುಖ್ಯೋಪಾಧ್ಯಾಯರ ಹುದ್ದೆ ಸೃಷ್ಠಿಯಾಯಿತು. ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆಗಳು ಇದೆ. ಪ್ರತಿವರ್ಷ ದಾನಿಗಳ ನೆರವಿನಿಂದ ನೋಟು ಪುಸ್ತಕ, ಶಾಲಾ ಬ್ಯಾಗ್‌ ವಿತರಿಸಲಾಗುತ್ತಿದೆ.

Advertisement

ಮುಖ್ಯೋಪಾಧ್ಯಾಯರಾಗಿ ಇದ್ದವರು
ವೆಂಕಟರಾವ್‌, ಜೋಸೆಪ್‌ ಡಿ’ಸೋಜಾ, ಕೃಷ್ಣ ಮರಕಾಲ, ಯು. ದಯಾನಂದ, ವಿ. ಭೀಮಪ್ಪ, ರಘುರಾಮ ಶೆಟ್ಟಿ, ಸುಮತಿ ಮುಂತಾದವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. 1940ರಿಂದ 1985ರವರೆಗಿನ ಸಂದರ್ಭದಲ್ಲಿ ಈ ಶಾಲೆಯಲ್ಲಿ ಸುಮಾರು 900ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಯೊಂದು ತರಗತಿಗಳಲ್ಲೂ ಎರಡು ಮೂರು ವಿಭಾಗಳಿತ್ತು. ಪ್ರಸ್ತುತ ಶಾಲೆಯಲ್ಲಿ 108 ವಿದ್ಯಾರ್ಥಿಗಳಿದ್ದು 5 ಮಂದಿ ಶಿಕ್ಷಕರು ಇದ್ದಾರೆ.

ಮಲ್ಪೆ ಪರಿಸರದ ಸುತ್ತಮುತ್ತಲ ಶೇ.90ರಷ್ಟು ಮಂದಿ ಈ ಶಾಲೆಯ ಹಳೆವಿದ್ಯಾರ್ಥಿಗಳಾಗಿದ್ದಾರೆ.
ಮಲ್ಪೆ ಮಧ್ವರಾಜರ ಸಹೋದರರು, ಉಡುಪಿ ಕಿದಿಯೂರು ಹೋಟೆಲಿನ ಮಾಲಕ ಭುವನೇಂದ್ರ ಕಿದಿಯೂರು, ರಾಷ್ಟ್ರ ಪ್ರಶಸ್ತಿ ವಿಜೇತ ಮಲ್ಪೆ ರಾಘವೇಂದ್ರ ಅವರುಗಳು ಈ ಶಾಲೆಯಲ್ಲಿ ಕಲಿತವರು. ಸರಕಾರ ಉನ್ನತ ಹುದ್ದೆಯನ್ನು ಅಲಂಕರಿಸಿದ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಲವಾರು ಮಂದಿ ಇಲ್ಲಿಯ ಹಳೆವಿದ್ಯಾರ್ಥಿಗಳಾಗಿದ್ದಾರೆ.

ವಲಸೆ ಕಾರ್ಮಿಕರ ಬಡ ಮಕ್ಕಳೇ ಹೆಚ್ಚಾಗಿರುವ ನಮ್ಮ ಶಾಲೆಯಲ್ಲಿ ಅವರ ಅಗತ್ಯಗಳನ್ನು ಪೂರೈಸಲು ನಮ್ಮ ಜತೆ ಏಳೂರು ಮೊಗವೀರ ಸಂಘ, ಹಳೆವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ, ಸಹ ಶಿಕ್ಷಕರೆಲ್ಲರೂ ಮುತುವರ್ಜಿ ವಹಿಸಿ ಶ್ರಮಿಸುತಿದ್ದಾರೆ. ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲೂ ಇದ್ದೇವೆ.
-ಇಂದಿರಾ, ಮುಖ್ಯ ಶಿಕ್ಷಕಿ

ಕಳೆದ 78ವರ್ಷಗಳಿಂದ ಹಳೆ ವಿದ್ಯಾರ್ಥಿ ಸಂಘವು ನೋಟ್‌ ಪುಸ್ತಕ, ಸ್ಕೂಲ್‌ ಬ್ಯಾಗ್‌ ಸೇರಿದಂತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಮತ್ತು ಶಾಲೆಯ ಮೂಲ ಸೌಕರ್ಯ ಒದಗಿಸುತ್ತಾ ಬೆನ್ನೆಲುಬಾಗಿ ಇಂದಿಗೂ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಶಿಕ್ಷಕರ ಕೊರತೆ ಕಂಡು ಬಂದ ಸಂದರ್ಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ನೇಮಿಸಿ, ದಾನಿಗಳ ನೆರವಿನಿಂದ ವೇತನವನ್ನು ನೀಡುತ್ತಾ ಬಂದಿದೆ.
-ಎಂ. ಆನಂದ್ರಾಜ್‌ ಮಲ್ಪೆ, ಹಳೆವಿದ್ಯಾರ್ಥಿ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next