Advertisement

ರಾಜ್ಯದ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ

09:45 PM Jul 28, 2022 | Team Udayavani |

ಬೆಂಗಳೂರು: ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಒದಗಿಸಿದೆ.

Advertisement

ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ.ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆ ಬಂದಿತ್ತು.

ಈ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಲ್ಲಿಸಿರುವ ಸಮಗ್ರ ಮಾಹಿತಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಲಾಗಿದ್ದು, ಇನ್ನೂ 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 1,006 ಗ್ರಾಮಗಳು ಬೇಚರಾಕ್‌ ಗ್ರಾಮಗಳಾಗಿವೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.

ಈ ಮಾಹಿತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರ ಒದಗಿಸಿರುವ ಮಾಹಿತಿಯನ್ನು ಪರಿಶೀಲಿಸಿ ವಾಸ್ತವ ಸಂಗತಿ ಏನಿದೆ ಎಂದು ಹೋಲಿಕೆ ಮಾಡಿ ಎರಡು ವಾರಗಳಲ್ಲಿ ವರದಿ ನೀಡುವಂತೆ ಅರ್ಜಿದಾರ ಮಹಮ್ಮದ್‌ ಇಕ್ಬಾಲ್‌ ಅವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಸರ್ಕಾರ ಸಲ್ಲಿಸಿದ್ದೇನು?: ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಗ್ರಾಮವಾರು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 2022ರ ಜೂ.30ರಂದು ಆದೇಶ ನೀಡಿತ್ತು. ಅದರಂತೆ ಸರ್ಕಾರ, ಎಲ್ಲಾ 31 ಜಿಲ್ಲೆಗಳ 27,099 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಿರುವ ಜಿಲ್ಲಾಧಿಕಾರಿಗಳ ಆದೇಶ, ಆರ್‌ಟಿಸಿ ಮತ್ತು ಕಂದಾಯ ದಾಖಲೆಗಳ ಸಮಗ್ರ ಮಾಹಿತಿಯನ್ನು ಸಲ್ಲಿಸಿದೆ.

Advertisement

ಬೆಂಗಳೂರಲ್ಲಿ 28 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲ:

ಬೆಂಗಳೂರು ನಗರ ಜಿಲ್ಲೆಯ 813 ಗ್ರಾಮಗಳ ಪೈಕಿ 760 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒಗದಿಸಲಾಗಿದೆ. ಬಾಕಿ 53 ಗ್ರಾಮಗಳ ಪೈಕಿ 28 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದೇ ಇರುವುದರಿಂದ ಪಕ್ಕದ ಗ್ರಾಮದ ಸ್ಮಶಾನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. 23 ಗ್ರಾಮಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವುದರಿಂದ ಚಿತಾಗಾರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಉಳಿದಂತೆ 2 ಗ್ರಾಮಗಳು ಹಿಂದಿನಿಂದಲೂ ಪಕ್ಕದ ಗ್ರಾಮದ ಸ್ಮಶಾನವನ್ನು ಉಪಯೋಗಿಸಿರುತ್ತಾರೆ ಎಂದು ಸರ್ಕಾರ ಮಾಹಿತಿ ಒದಗಿಸಿದೆ.

ಹಳ್ಳದ ದಂಡೆ, ಖಾಸಗಿ ಜಮೀನು ಬಳಕೆ:

ಬಾಗಲಕೋಟೆ ಜಿಲ್ಲೆಯ 593 ಗ್ರಾಮಗಳ ಪೈಕಿ 521 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒಗದಿಸಲಾಗಿದೆ. 72 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದ್ದು, ಅದರಲ್ಲಿ 4 ತಾಂಡಾಗಳು ಮತ್ತು 30 ಗ್ರಾಮಗಳಿಗೆ ಸ್ಮಶಾನಕ್ಕಾಗಿ ಹಳ್ಳದ ದಂಡೆ, ಖಾಸಗಿ ಜಮೀನು ಮತ್ತು ಅರಣ್ಯ ಜಮೀನು ಉಪಯೋಗಿಸುತ್ತಿದ್ದು, 38 ಗ್ರಾಮಗಳಿಗೆ ಸ್ಮಶಾನದ ಅವಶ್ಯಕತೆ ಇರುತ್ತದೆ ಎಂದು ಸರ್ಕಾರ ಹೇಳಿದೆ.

ಟೆಂಪೋದಲ್ಲಿ ದಾಖಲೆ ತಂದ ಸರ್ಕಾರ:

ಸ್ಮಶಾನ ಸೌಲಭ್ಯ ಒದಗಿಸಿರುವ ಬಗ್ಗೆ ಗ್ರಾಮವಾರು ವಿವರ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ, ಸ್ಮಶಾನ ಸೌಲಭ್ಯ ಒದಗಿಸಿರುವ 27,099 ಗ್ರಾಮಗಳಲ್ಲಿ ಸ್ಮಶಾನ ಜಾಗ ಮಂಜೂರು ಮಾಡಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿಗಳು, ಆರ್‌ಟಿಸಿ ಮತ್ತಿತರರ ಕಂದಾಯ ದಾಖಲೆಗಳು ಸೇರಿದಂತೆ 31 ಜಿಲ್ಲೆಗಳ 27 ಸಾವಿರಕ್ಕೂ ಹೆಚ್ಚು ದಾಖಲೆಗಳ ದೊಡ್ಡ ಬಂಡಲ್‌ಗ‌ಳನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ದಾಖಲೆಗಳು ಎಲ್ಲಿವೆ ಎಂದು ನ್ಯಾಯಪೀಠ ಕೇಳಿತು. ಅದಕ್ಕೆ ಕೋರ್ಟ್‌ನ ಹೊರಗಡೆ ಟೆಂಪೋ ದಲ್ಲಿ ತರಲಾಗಿದೆ ಎಂದು ಸರ್ಕಾರಿ ವಕೀಲರು ಹೇಳಿದರು. ಆಯ್ತು ದಾಖಲೆಗಳನ್ನು ವಾಪಸ್‌ ತೆಗೆದುಕೊಂಡು ಹೋಗಿ ಅಗತ್ಯ ಬಿದ್ದಲ್ಲಿ ಅವುಗಳನ್ನು ತರಿಸಿಕೊಳ್ಳಲಾಗುವುದು ಎಂದು ನ್ಯಾಯಪೀಠ ಹೇಳಿತು.

ಎಲ್ಲೆಲ್ಲಿ ಸ್ಮಶಾನ ಇಲ್ಲ?:

ಧಾರವಾಡ-76, ಗದಗ-67, ಹಾವೇರಿ-40, ವಿಜಯಪುರ-71, ಚಾಮರಾಜನಗರ-24, ಚಿಕ್ಕಮಗಳೂರು-29, ಬಾಗಲಕೋಟೆ-72, ಹಾಸನ-157, ಕೊಡಗು-57, ಮಂಡ್ಯ-38, ಮೈಸೂರು-51, ಉಡುಪಿ-02, ಬೀದರ್‌-55, ಕಲಬುರಗಿ-47, ಕೊಪ್ಪಳ-08, ರಾಯಚೂರು-83, ಬೆಳಗಾವಿ-307, ಯಾದಗಿರಿ-39, ವಿಜಯನಗರ-05, ಚಿತ್ರದುರ್ಗ-03, ದಾವಣಗೆರೆ-12, ಕೋಲಾರ-12, ರಾಮನಗರ-12, ಶಿವಮೊಗ್ಗ-187 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next