ವಾಡಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಒಂದು ವಾರದಿಂದ ನಡೆಯುತ್ತಿರುವ ಲಾರಿ ಮುಷ್ಕರದಿಂದ ಎಲ್ಲೆಡೆ ಆಹಾರ ಪದಾರ್ಥ, ತರಕಾರಿ ಪೂರೈಕೆ ಹಾಗೂ ಇತರ ಸರಕು ಸಾಗಾಟದ ಸಂಪರ್ಕ ಕೊಂಡಿಯೇ ಕಳಚಿದ್ದು, ವ್ಯಾಪಾರ ವಹಿವಾಟಿನ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ.
ಕಲಬುರಗಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಸಿಮೆಂಟ್‌ನ್ನು ದೇಶದ ನಾನಾ ಭಾಗಗಳಿಗೆ ಸಾಗಿಸಲು ಮುಷ್ಕರದಿಂದ ಹೇಳಿಕೊಳ್ಳುವಂಥ ಅಡ್ಡಿಯೇನೂ ಆಗಿಲ್ಲ. ಲಾರಿ ಮುಷ್ಕರದ ಮಧ್ಯೆಯೂ ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ಅಸೋಸಿಯೇಟೆಡ್ ಸಿಮೆಂಟ್ ಕಂಪನಿ (ಎಸಿಸಿ) ನಿತ್ಯ ಸಾವಿರಾರು ಟನ್ ಸಿಮೆಂಟ್ ಸರಕನ್ನು ಯಾವುದೇ ಅಡೆತಡೆಯಿಲ್ಲದೆ ಸಾಗಿಸುತ್ತಿದೆ.
ಪಟ್ಟಣದ ಎಸಿಸಿ ಕಾರ್ಖಾನೆಗೆ ಬರುವ ಸಿಮೆಂಟ್ ಸಾಗಾಣಿಕೆ ಲಾರಿಗಳು ಕಂಪನಿ ಆವರಣದಲ್ಲಿ ಪಾಳಿ ಹಚ್ಚಿವೆ. ಗೋವಾ, ಬೆಳಗಾವಿ, ಆಂಧ್ರದ ಕೊಡೆಂಗಲ್, ಬೆಂಗಳೂರು, ಬಳ್ಳಾರಿ, ಕೊಪ್ಪಳ, ಮೀರಜ, ಸೊಲ್ಲಾಪುರ, ಪಣಜಿ, ಹೈದರಾಬಾದ ಮುಂತಾದ ಪ್ರಮುಖ ನಗರಗಳಿಗೆ ಟ್ರಾನ್ಸ್‌ಪೊàರ್ಟ್‌ಗಳ ಮೂಲಕ ಸಿಮೆಂಟ್ ಸಾಗಾಣಿಕೆಯಾಗುತ್ತದೆ.
ಸಂಘಟಿತ ಹೋರಾಟಕ್ಕೆ ಪೆಟ್ಟು: ಮುಷ್ಕರ ಬೆಂಬಲಿಸಿ ಸರಕು ಸಾಗಾಟ ಸ್ಥಗಿತಗೊಳಿಸಬೇಕಿದ್ದ ಸ್ಥಳೀಯ ಮತ್ತು ಜಿಲ್ಲಾ ಲಾರಿ ಮಾಲೀಕರ ಸಂಘ, ಲಾರಿಗಳನ್ನು ರಸ್ತೆಗಿಳಿಸಿ ಮುಷ್ಕರದಿಂದ ಹಿಂದೆ ಸರಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಲಾರಿ ಮಾಲೀಕರ ಸಂಘಗಳಲ್ಲಿಯೇ ಮೂರ್‍ನಾಲ್ಕು ಗುಂಪುಗಳಾಗಿವೆ ಎನ್ನಲಾಗಿದ್ದು, ಸಂಘಟಿತ ಹೋರಾಟಕ್ಕೆ ಪೆಟ್ಟು ಬಿದ್ದಿದೆ.
ಸಿಮೆಂಟ್ ಚೀಲಗಳನ್ನು ಲೋಡ್ ಮಾಡಿಕೊಂಡು ಸಾಗುತ್ತಿರುವ ಲಾರಿಗಳು ಒಂದೆಡೆಯಾದರೆ, ಗಣಿಗಳಿಂದ ಪರ್ಸಿ (ಹಾಸುಗಲ್ಲು) ಕಲ್ಲುಗಳ ಹೊತ್ತು ಸಾಗುತ್ತಿರುವ ಲಾರಿಗಳು ಇನ್ನೊಂದೆಡೆ. ಲಾರಿ ಮುಷ್ಕರದಿಂದಾಗಿ ಸಿಮೆಂಟ್ ಉದ್ಯಮ ಮತ್ತು ಗಣಿಗಾರಿಕೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂಬುದು ಖಾತ್ರಿಯಾಗಿದೆ.