Advertisement
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯ ಅನಷ್ಠಾನ ಜವಾಬ್ದಾರಿಯನ್ನು ಸರ್ಕಾರ ಬಿಬಿಎಂಪಿಗೆ ವಹಿಸಿದ್ದು, ಈಗಾಗಲೇ 101 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ನಿರ್ಮಾಣ ಪೂರ್ಣಗೊಂಡಿದೆ. ಉಳಿದ 97 ಕಡೆ ಕ್ಯಾಂಟೀನ್ ನಿರ್ಮಾಣಕ್ಕೆ ಪಾಲಿಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಇಂದಿರಾ ಅಡುಗೆಮನೆಗಳಿಂದ ಕ್ಯಾಂಟೀನ್‌ಗಳಿಗೆ ಸರಬರಾಜು ಮತ್ತು ಕ್ಯಾಂಟೀನ್‌ಗಳಲ್ಲಿ ವಿತರಣೆಯಾಗುವ ಆಹಾರ ಪದಾರ್ಥಗಳ ದೈನಂದಿನ ಪ್ರಕ್ರಿಯೆಗಳ ಪರಿಶೀಲನೆ ಮತ್ತು ವ್ಯವಸ್ಥಿತ ಮೇಲ್ವಿಚಾರಣೆ ಜವಾಬ್ದಾರಿಯನ್ನು ಜಂಟಿ ಆಯುಕ್ತರು (ಹಣಕಾಸು) ನೋಡಿಕೊಳ್ಳಲಿದ್ದಾರೆ. ಇಂದಿರಾ ಕ್ಯಾಂಟೀನ್ ಕೋಶವನ್ನು ಕೇಂದ್ರ ಕಚೇರಿಯ ಹೆಚ್ಚುವರಿ/ಜಂಟಿ ಆಯುಕ್ತರು (ಹಣಕಾಸು) ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಇವರು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಡುಗೆ ಮನೆಗೆ ಒಬ್ಬರಂತೆ ನಿವೃತ್ತ ಸೇನಾಧಿಕಾರಿಯನ್ನು ನೇಮಿಸಿಕೊಳ್ಳಬಹುದಾಗಿದೆ.
Related Articles
ನಗರದಲ್ಲಿನ 27 ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಮಾಣವಾಗುವ ಒಂದು ಅಡುಗೆಮನೆಗೆ ಒಬ್ಬರಂತೆ ಒಟ್ಟು 27 ನಿವೃತ್ತ ಕಿರಿಯ ಸೇನಾ ಆಯುಕ್ತರನ್ನು ಹಂತ ಹಂತವಾಗಿ ನೇಮಿಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅವರು ಅಡುಗೆ ಮನೆಯಿಂದ ಸರಬರಾಜಾಗುವ ಮತ್ತು ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರದ ಬಗ್ಗೆ ನಿಗಾವಹಿಸಲಿದ್ದು, ಕ್ಯಾಂಟೀನ್‌ನ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾಲಿಕೆಯ ಕೇಂದ್ರ ಕಚೇರಿಗೆ ಸಲ್ಲಿಸಲಿದ್ದಾರೆ.
Advertisement
ತಿಂಗಳಿಗೊಂದು ಸಭೆಹೆಚ್ಚುವರಿ/ಜಂಟಿ ಆಯುಕ್ತರ(ಹಣಕಾಸು) ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ಬಾರಿ ಸಭೆ ನಡೆಸುವುದರೊಂದಿಗೆ ಜಂಟಿ ಆಯುಕ್ತರು, ವಲಯದ ಮುಖ್ಯ ಎಂಜಿನಿಯರ್ ಹಾಗೂ ಮುಖ್ಯ ಆರೋಗ್ಯಾಧಿಕಾರಿಗಳ ಜೊತೆಗೆ ಚರ್ಚಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರ ಸಂಖ್ಯೆ ಹಾಗೂ ಇತರೆ ಸುಧಾರಣಾ ಕ್ರಮಗಳ ಕುರಿತು ಕ್ರಮಕೈಗೊಳ್ಳುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಸೇನಾ ಆಯುಕ್ತರಿಗೆ ವೇತನ ನಿಗದಿ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಅಡುಗೆ ಮನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಕರ್ನಾಟಕ ಸೈನಿಕ ಕಲ್ಯಾಣ ಉದ್ಯೋಗ ಸಂಸ್ಥೆಯಿಂದ 27 ನಿವೃತ್ತ ಕಿರಿಯ ಸೇನಾ ಆಯುಕ್ತರು ಹಾಗೂ ಅವರ ಮೇಲ್ವಿಚಾರಣೆಗಾಗಿ ಒಬ್ಬರು ಮುಖ್ಯ ಅಧಿಕಾರಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಅದರಂತೆ ಕಿರಿಯ ಸೇನಾ ಆಯುಕ್ತರಿಗೆ ಮಾಸಿಕ 40 ಸಾವಿರ ರೂ. ವೇತನ, 4500 ರೂ. ವಾಹನ ಭತ್ಯೆ, 475ರೂ ಸಮವಸ್ತ್ರ ನಿರ್ವಹಣೆಗಾಗಿ ನೀಡಲಾಗುತ್ತದೆ. ಅದೇ ರೀತಿ ಮುಖ್ಯ ಅಧಿಕಾರಿಗಳಿಗೆ ಮಾಸಿಕ 90 ಸಾವಿರ ರೂ. ವೇತನ, 9375 ವಾಹನ ಭತ್ಯೆ ಮತ್ತು 475 ರೂ. ಸಮವಸ್ತ್ರ ಭತ್ಯೆ ನಿಗದಿಪಡಿಸಲಾಗಿದೆ. ಅವರನ್ನು ನೇಮಿಸಿಕೊಳ್ಳುವ ಮತ್ತು ರದ್ದುಪಡಿಸುವ ಅಧಿಕಾರವನ್ನು ವಿಶೇಷ ಆಯುಕ್ತ (ಆಡಳಿತ)ರಿಗೆ ನೀಡಲಾಗಿದೆ. ಕ್ಯಾಂಟೀನ್ ಕೋಶದ ಕಾರ್ಯವೇನು?
-ಕೋಶವು ನಿತ್ಯ ಅಡುಗೆಮನೆಗಳಿಂದ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮತ್ತು ವಿತರಣೆ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲಿದೆ
-ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಸ್ವತ್ಛತೆಯ ಮೇಲ್ವಿಚಾರಣೆ
-ಆಹಾರದ ಗುಣಮಟ್ಟ ಮತ್ತು ಪ್ರಮಾಣ ಖಚಿತಪಡಿಸುವುದು
-ಜಂಟಿ ಆಯುಕ್ತರಿಂದ ಪಡೆದ ಬಿಲ್ಲುಗಳ ಪರಿಶೀಲನೆ ಮತ್ತು ಪಾವತಿಯಾದ ಬಿಲ್ಲುಗಳ ದಾಖಲೆಗಳ ಸುರಕ್ಷಿತವಾಗಿಡುವುದು
-ಆಹಾರ ವಿತರಕರ ಸಿಬ್ಬಂದಿಯ ನಡವಳಿಕೆ ಹಾಗೂ ಸ್ವತ್ಛತೆ ಗುಣಾತ್ಮಕ ಸೇವೆ ಒದಗಿಸುತ್ತಿರುವ ಬಗ್ಗೆ ಖಾತ್ರಿಪಡಿಸುವುದು
-ಪಾಲಿಕೆಯ ಆದೇಶಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ
-ನಿತ್ಯ ಅಡುಗೆ ಮನೆ ಹಾಗೂ ಕ್ಯಾಂಟೀನ್‌ಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಕುರಿತು ಪಾಲಿಕೆಗೆ ಸಮಗ್ರ ವರದಿ ನೀಡುವುದು ಕ್ಯಾಂಟೀನ್‌ಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಹೊಣೆಯನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿರುವುದರಿಂದ ಇತರ ಕೆಲಸಗಳು ವಿಳಂಬವಾಗುವುದು ಕಂಡುಬಂದಿದೆ. ಹೀಗಾಗಿ ಪ್ರತ್ಯೇಕ ಕೋಶ ರಚಿಸಿ, ಪ್ರತಿ ಅಡುಗೆ ಮನೆಗೆ ಒಬ್ಬರಂತೆ ಕಿರಿಯ ಸೇನಾ ಆಯುಕ್ತರು ಮತ್ತು ಮುಖ್ಯ ಅಧಿಕಾರಿಯನ್ನು ನೇಮಿಸಲು ಆದೇಶಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯಕ್ತ