“ಮಿಸ್ಸಿಂಗ್ ಬಾಯ್…’ ಕಾಣೆಯಾದ ಹುಡುಗನೊಬ್ಬನ ಸತ್ಯಕಥೆ ಇದು. ಕನ್ನಡದಲ್ಲಿ ಅನೇಕ ನೈಜ ಘಟನೆ ಕುರಿತ ಚಿತ್ರಗಳು ಬಂದಿವೆ. ಆ ಸಾಲಿಗೆ “ಮಿಸ್ಸಿಂಗ್ ಬಾಯ್’ ಕೂಡ ಹೊಸ ಸೇರ್ಪಡೆ. ಇದು ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು ವ್ಯಥೆ. ಈಗಾಗಲೇ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅದಕ್ಕೂ ಮುನ್ನ ಚಿತ್ರದ ಅನಿಮೇಷನ್ ಟೀಸರ್‌ವೊಂದು ಜೋರಾಗಿ ಸದ್ದು ಮಾಡುತ್ತಿದೆ.
ಹೌದು, ನಿರ್ದೇಶಕ ರಘುರಾಮ್ ಅವರು ಸೆಲೆಬ್ರೆಟಿ ಪತ್ನಿಯರ ಟ್ವಿಟ್ಟರ್ ಹಾಗೂ ಇನ್ಸ್‌ಸ್ಟಾಗ್ರಾಮ್ ಖಾತೆಗಳಲ್ಲಿ ಅನಿಮೇಷನ್ ಟೀಸರ್ ಬಿಡುಗಡೆ ಮಾಡಿಸುವ ಮೂಲಕ ಚಿತ್ರದ ಕಥೆಯೊಳಗಿನ ಗುಟ್ಟು ಮತ್ತು ಪೋಷಕರಿಗೊಂದು ಸಣ್ಣ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಅನಿಮೇಷನ್ ಟೀಸರ್‌ಗೆ ನಟ ಗಣೇಶ್ ಅವರು ವಾಯ್ಸ್ ಓವರ್ ಕೊಟ್ಟಿದ್ದಾರೆ.
ಅನಿಮೇಷನ್ ಪಾತ್ರಕ್ಕೆ ಡಬ್ ಮಾಡಿಸುವ ಯೋಚನೆ ಬಂದಿದ್ದೇ ತಡ, ನಿರ್ದೇಶಕ ರಘುರಾಮ್ ಅವರು, ಎಲ್ಲರಿಗೂ ಈ “ಮಿಸ್ಸಿಂಗ್ ಬಾಯ್’ ಚಿತ್ರದ ಅನಿಮೇಷನ್ ಟೀಸರ್ ತಲುಪಿಸಬೇಕೆಂಬ ಉದ್ದೇಶದಿಂದ ಗಣೇಶ್ ಅವರಿಂದ ಮೌಲ್ಯ ಸಾರುವ ಆರು ಸಾಲುಗಳನ್ನು ಹೇಳಿಸಿದ್ದಾರೆ. ಗಣೇಶ್ ಅವರು ಕೊಟ್ಟ ಧ್ವನಿಯಿಂದಾಗಿ, ಅನಿಮೇಷನ್ ಟೀಸರ್‌ಗೆ ಮತ್ತೂಂದು ತೂಕ ಹೆಚ್ಚಾಗಿದೆ ಎಂಬುದು ನಿರ್ದೇಸಕ ರಘುರಾಮ್ ಅವರ ಮಾತು.
ಇನ್ನು, ಜನವರಿ 1 ರ ಹೊಸ ವರ್ಷದ ದಿನದಂದು ಐಪಿಎಸ್ ಅಧಿಕಾರಿ ರೂಪಾ, ಪರಿಮಳ ಜಗ್ಗೇಶ್, ಪ್ರಿಯಾ ಸುದೀಪ್, ಅನುಪ್ರಭಾಕರ್ ಸೇರಿದಂತೆ ಇತರರು ತಮ್ಮ ಟ್ವಿಟ್ಟರ್ ಹಾಗೂ ಇನ್ಸ್‌ಸ್ಟಾಗ್ರಾಮ್‌ಗಳಲ್ಲಿ ಅನಿಮೇಷಮನ್ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಅನಿಮೇಷನ್ ಟೀಸರ್‌ನಲ್ಲಿ ಚಿತ್ರದ ಒನ್‌ಲೈನ್ ಸ್ಟೋರಿ ಕೂಡ ಇದೆ. ತಂದೆ ತಾಯಿ ಜೊತೆ ಇರುವ ಮಗ ಆಕಸ್ಮಿಕವಾಗಿ ರೈಲ್ವೆ ಸ್ಟೇಷನ್‌ನಲ್ಲಿ ಮಿಸ್ ಆದಾಗ, ಏನೆಲ್ಲಾ ನಡೆದುಹೋಗುತ್ತೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.
ಈ ಮೂಲಕ ಪೋಷಕರು ತಮ್ಮ ಮಕ್ಕಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬ ಸಂದೇಶವೂ ಇದೆ ಎನ್ನುತ್ತಾರೆ ನಿರ್ದೇಶಕರು. ಅಂದಹಾಗೆ, “ಇದು ನೈಜ ಘಟನೆಯ ಚಿತ್ರ. ಸುಮಾರು 27 ವರ್ಷಗಳ ಹಿಂದೆ ನಡೆದ ಘಟನೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಥ್ರಿಲ್ಲರ್ ಅಂಶದೊಂದಿಗೆ ಕಥೆ ಸಾಗಲಿದೆ. ಇದು ಉತ್ತರ ಕರ್ನಾಟಕದಲ್ಲಿ ನಡೆದ ಘಟನೆ. ಕಥೆಯಲ್ಲಿ ಸುಮಾರು ಏಳು ವರ್ಷದ ಹುಡುಗನೊಬ್ಬ, ಆಟವಾಡುತ್ತಲೇ ರೈಲಿನಲ್ಲಿ ಪಯಣ ಬೆಳೆಸಿ ಕಾಣೆಯಾಗುತ್ತಾನೆ.
ಹಾಗೆ ಕಾಣೆಯಾದವನು ದೂರದ ಸ್ವೀಡನ್ ದೇಶ ಸೇರಿಕೊಳ್ಳುತ್ತಾನೆ. ಇಪ್ಪತ್ತೇಳು ವರ್ಷದ ಬಳಿಕ ಸ್ವೀಡನ್‌ನಿಂದ ಬರುವ ಸುಮಾರು 35 ವರ್ಷದ ಯುವಕ, ತನ್ನ ಅಪ್ಪ-ಅಮ್ಮನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗುತ್ತಾನೆ. ಕಳೆದು ಹೋಗಿದ್ದ ಹುಡುಗ ಪುನಃ ವಿದೇಶದಿಂದ ಸ್ವದೇಶಕ್ಕೆ ಬಂದು ಅಪ್ಪ-ಅಮ್ಮ ಬೇಕು ಅಂದಾಗ, ಪೊಲೀಸರು ಹೇಗೆಲ್ಲಾ ಅವನ ಹೆತ್ತವರನ್ನು ಹುಡುಕುತ್ತಾರೆ.
ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬುದು ಚಿತ್ರದ ಕಥೆ. ಅಂದಹಾಗೆ, ಇದು ಪೊಲೀಸ್ ಇಲಾಖೆಗೆ ಸವಾಲು ಎನಿಸುವಂತಹ ಪ್ರಕರಣ. ಪ್ರತಿಯೊಬ್ಬರ ಹೃದಯ ತಟ್ಟುವ ಕಥೆ ಇದಾಗಿರುವುದರಿಂದ ಎಲ್ಲವನ್ನೂ ಸೂಕ್ಷ್ಮವಾಗಿ, ಅಷ್ಟೇ ಭಾವುಕತೆ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಸ್ವೀಡನ್‌ಗೆ ಹೋಗಿ ನೆಲೆಸಿರುವ ಯುವಕ ಈಗ ಎಲ್ಲಿದ್ದಾನೆ, ಅವನ ಹೆತ್ತವರು ಹೇಗಿದ್ದಾರೆ ಎಂಬ ಕುರಿತ ಕಥೆ ಸಾಗಲಿದೆ.
ಚಿತ್ರದಲ್ಲಿ ಗುರುನಂದನ್ ನಾಯಕರಾದರೆ, ಕೇರಳ ಮೂಲದ ಅರ್ಚನಾ ಜಯಕೃಷ್ಣ ನಾಯಕಿ, ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಅಭಿಜಯ್ ಬಾಲನಟರಾಗಿ ನಟಿಸಿದ್ದಾನೆ. ಉಳಿದಂತೆ ಲಹರಿವೇಲು ಇತರರು ಇದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಜೋನಿ ಹರ್ಷ ಸಂಕಲನ ಮಾಡಿದರೆ, ಜಗದೀಶ್ ವಾಲಿ ಛಾಯಗ್ರಹಣವಿದೆ. ಕೊಲ್ಲ ಪ್ರವೀಣ್ ಚಿತ್ರದ ನಿರ್ಮಾಣ ಮಾಡಿದ್ದಾರೆ.