ಗದಗ: ತಾಲೂಕಿನ ಸಮೀಪದ ತಿಮ್ಮಾಪುರ ಗ್ರಾಮದಲ್ಲಿ ನೂತನ ದುರ್ಗಾದೇವಿ ರಥೋತ್ಸವ ಇತ್ತೀಚೆಗೆ ನಡೆಯಿತು.
ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ರಥೋತ್ಸವ ಸಾಗಿತು.ಹರ್ಲಾಪುರ ಕೊಟ್ಟೂರೇಶ್ವರ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವ ಆರಂಭವಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು, ನಿಂಬೆ ಹಣ್ಣು ಎಸೆದು ದುರ್ಗಾ ಮಾತೆಗೆ ಜೈ ಎಂದು ಜಯಘೋಷ ಮೊಳಗಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದುರ್ಗಾದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವವನ್ನು ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ ಉದ್ಘಾಟಿಸಿದರು.
ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್.ಬಳ್ಳಾರಿ, ಗ್ರಾಪಂ ಅಧ್ಯಕ್ಷೆ ರೇಣವ್ವ ಸೋಮಾಪುರ, ಉಪಾಧ್ಯಕ್ಷ ಯಲ್ಲಪ್ಪ ಬಾಬರಿ, ಹಾಗೂ ಗ್ರಾಪಂ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.