Advertisement

ತೋಂಟದ ಸಿದ್ಧಲಿಂಗ ಶ್ರೀ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತಿರುವುದು ಕೈಬಿಡಬೇಕು

12:53 PM Feb 19, 2024 | Team Udayavani |

ಗದಗ: ಗದಗ-ಡಂಬಳ ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ ಅವರ 75ನೇ ಜಯಂತಿ‌ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಂಟದಾರ್ಯ ಮಠವು ಫೆ. 21ರಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಅನ್ವಯಿಸಿ ಅವರ 75ನೇ ಜಯಂತಿ ದಿನವನ್ನು ಭಾವೈಕ್ಯತೆಯ ದಿನವನ್ನು ಆಚರಿಸುವುದಾಗಿ, ಜೊತೆಗೆ ಭಾವೈಕ್ಯತೆಯ ಹರಿಹಾರ ಎಂಬುದಾಗಿ ತಿಳಿಸಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಹೇಳಿದರು.

ಸುಮಾರು 500 ವರ್ಷಗಳ ಭಾವೈಕ್ಯತಾ ಪರಂಪರೆ ಇತಿಹಾಸವನ್ನು ಹೊಂದಿರುವ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷ ಪದವನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಬಳಸಿರುವುದನ್ನು ಖಂಡಿಸುತ್ತೇವೆ. ಅವರ ಜಯಂತಿ ದಿನವನ್ನು ಭಾವೈಕ್ಯತೆಯ ದಿನ ಎಂದು ಪ್ರಕಟಿಸಿರುವುದು ಶಿರಹಟ್ಟಿ ಮಠದ ಭಕ್ತವೃಂದಕ್ಕೆ ಅಪಾರ ನೋವನ್ನುಂಟು ಮಾಡಿದೆ ಎಂದರು.

ಅಲ್ಲದೆ, ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೇ ತಮ್ಮ ಜೀವಿತಾವಧಿಯ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಕರ್ತೃಗಳನ್ನು ಭಾವೈಕ್ಯತೆಯ ಹರಿಕಾರರೆಂದು ತಿಳಿಸಿದ್ದಾರೆ. ಹೀಗಾಗಿ ಭಾವೈಕ್ಯತಾ ದಿನವನ್ನು ಆಚರಿಸುವುದನ್ನು ಬಿಟ್ಟು, ಲಿ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಜಯಂತಿಯನ್ನು ಆಚರಿಸಲು ನಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿದರು.

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪ್ರಾತಿನಿಧ್ಯ ಹೊಂದಿರುವ ಹಾಗೂ ವಿರಕ್ತಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವೀರಶೈವ ಲಿಂಗಾಯತ ಧರ್ಮವನ್ನು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಹೋರಾಟದ ಮುಂದಾಳತ್ವ ವಹಿಸಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಡೆಯನ್ನು 560ಕ್ಕೂ ಹೆಚ್ಚು ಮಠಾಧೀಶರು ಖಂಡಿಸಿದ್ದರು.

Advertisement

ಶಿರಹಟ್ಟಿ ಫಕೀರೇಶ್ವರ ಮಠವು 50 ಶಾಖಾಮಠಗಳನ್ನು, 5 ಶಾಖಾ ದರ್ಗಾಗಳನ್ನು ಹೊಂದಿದೆ. ಫಕ್ಕಿರೇಶ್ವರ ಮಠದಲ್ಲಿ ಮಂದಿರವಿದೆ, ಮಸೀದಿಯಿದೆ. ಗೋಪುರವೂ ಇದೆ, ಮಿನಾರ ಕೂಡಾ ಇದೆ. ಫಕೀರೇಶ್ವರ ಹೆಸರಿನಲ್ಲಿ ಫಕೀರನು ಇದ್ದಾನೆ, ಈಶ್ವರನೂ ಇದ್ದಾನೆ. ಜಗದ್ಗುರು ಫಕೀರೇಶ್ವರ ಮುಕುಟಪ್ರಾಯ ಭಾವೈಕ್ಯತೆ ಎಂಬ ಪದವನ್ನು ನಮ್ಮಿಂದ ಕಸಿದುಕೊಳ್ಳಲು ಯತ್ನಿಸುತ್ತಿರುವುದರಿಂದ, ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತೋಂಟದಾರ್ಯ ಮಠದ ಶ್ರೀಗಳಿಗೂ, ಆಡಳಿತ ವರ್ಗದವರಿಗೂ ಮನವರಿಕೆ ಮಾಡಿಕೊಟದಟಿದ್ದು, ಅವರ ಭಾವೈಕ್ಯತೆ ಪದವನ್ನು ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ. ಸಂಧಾನ ವಿಫಲವಾದಲ್ಲಿ ಫೆ. 21ರಂದು ಗದಗ ನಗರದಲ್ಲಿ ನಮ್ಮ ಕರಾಳ ದಿನವನ್ನು ಆಚರಿಸಲಾಗುವುದು ಎಂದು ಹೆಳಿದರು.

ಫಕೀರೇಶ್ವರ ಮಠದ ಭಕ್ತರಾದ ಎನ್.ಆರ್. ಕುಲಕರ್ಣಿ ಮಾತನಾಡಿ, ಭಾವೈಕ್ಯತಾ ದಿನ ವಿಷಯದ ಕುರಿತು ತೋಂಟದಾರ್ಯ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿಯವರು ಎರಡು ಮಠಗಳ ಭಕ್ತರಿಗೆ ಸಂಘರ್ಷಕ್ಕೆ ಉಂಟು ಮಾಡುವ ನಿರ್ಧಾರ ಕೈಬಿಡದಿದ್ದರೆ, ಫೆ. 21ರಂದು ಗದಗ ನಗರದ ಬನ್ನಿಕಟ್ಟಿ ಸಮೀಪದಲ್ಲಿರುವ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ಶಾಖಾಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಮಾಲಾರ್ಪಣೆ ಮಾಡಿ ನಮ್ಮ ಪಾಲಿನ ಕರಾಳ ದಿನಾಚರಣೆ ಅಂಗವಾಗಿ ಗದುಗಿನ ಬನ್ನಿಕಟ್ಟಿ, ಪಂಚರ ಹೊಂಡ, ಟಾಂಗಾ ಕೂಟ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ಬೈಕ್ ರ್ಯಾಲಿ, ಪಥ ಸಂಚಲನ ನಡೆಸಿ ತೋಂಟದಾರ್ಯ ರಥಬೀದಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿ.ಸಿ. ನೂರಶೆಟ್ಟರ, ಶಿವನಗೌಡ ಪಾಟೀಲ, ಸಂದೀಪ ಕಪ್ಒತ್ತನವರ, ಫಕ್ಕೀರೇಶ ರಟ್ಟಿಹಳ್ಳಿ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next