ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ಅದು ನಾಯಿ. ಶ್ವಾನ ಪ್ರೀತಿಯ ಕುರಿತು ಹಲವಾರು ಕಥೆಗಳಿವೆ. ತನ್ನನ್ನು ಸಾಕಿದ ಮಾಲೀಕ ಸಾವನ್ನಪ್ಪಿದ್ದ ಮೇಲೂ ನಿಯತ್ತು ತೋರಿದ ಜಪಾನ್ ನ “ಹಚಿಕೋ” ಎಂಬ ಶ್ವಾನದ ಕಥೆ ಯಾರಿಗೆ ಗೊತ್ತಿಲ್ಲ. ಹಚಿಕೋದ ಸ್ವಾಮಿನಿಷ್ಠೆಗಾಗಿ ಹಚಿಕೋ-ದಿ ಡಾಗ್ ಟೇಲ್ ಎಂಬ ಬಾಲಿವುಡ್ ಸಿನಿಮಾ ಕೂಡಾ ಎಲ್ಲರ ಮನಗೆದ್ದಿತ್ತು.
ಇದನ್ನೂ ಓದಿ:Tamil Nadu: ಸೆಂಥಿಲ್ ಬಾಲಾಜಿ ಪ್ರಕರಣಕ್ಕೆ ಮದ್ರಾಸ್ ಹೈಕೋರ್ಟ್ ನಲ್ಲಿ ಭಿನ್ನ ತೀರ್ಪು
ಹಚಿಕೋ ಒಂದು ಅನಾಥ ನಾಯಿ, ಇದು ಜಪಾನ್ ನ ಒಬ್ಬ ಪ್ರೊಫೆಸರ್ ಕೈಗೆ ಸಿಕ್ಕಿತ್ತು. ಅವರ ಆರೈಕೆಯಲ್ಲೇ ಬೆಳೆದ ಶ್ವಾನದ ಕಥೆ ಇದು. ಆ ನಾಯಿ ಪ್ರತಿದಿನವೂ ಅವರು ಓಡಾಡುತ್ತಿದ್ದ ರೈಲಿನಲ್ಲಿ ಸಿಕ್ಕಿತ್ತು.ಅವರ ಆರೈಕೆ, ಪ್ರೀತಿಯಲ್ಲಿ ಬೆಳೆದ ಹಚಿಕೋ ಪ್ರೊಫೆಸರ್ ಪ್ರತಿ ದಿನ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗ ಅದೇ ರೈಲ್ವೆ ಸ್ಟೇಷನ್ನಿನ ಮುಂದೆ ಕುಳಿತು ಕಾಯುತ್ತಿತ್ತು. ಪ್ರೊಫೆಸರ್ ಬಂದ ಮೇಲೆ ಅವರ ಜತೆಯಲ್ಲೇ ಮನೆಗೆ ಬರುತ್ತಿತ್ತು.
ಒಂದು ದಿನ ಅವರು ಕಾಲೇಜಿನಲ್ಲಿ ಮೃತಪಟ್ಟ ಕಾರಣ ಅಂದು ರೈಲಿನಲ್ಲೇ ಮಾಸ್ಟರ್ ಬರಲೇ ಇಲ್ಲ. ಆದರೆ ಪ್ರೊಫೆಸರ್ ಗಾಗಿ ಹಚಿಕೋ ನಾಯಿ ರೈಲ್ವೆ ಸ್ಟೇಷನ್ ನಲ್ಲಿ ಬರೋಬ್ಬರಿ ಹತ್ತು ವರ್ಷ ಕಳೆದಿತ್ತು. ಕೊನೆಗೆ ಒಂದು ದಿನ ಅಲ್ಲೇ ಸತ್ತು ಹೋಗಿತ್ತು…ಇದು ಹಚಿಕೋ ಎಂಬ ನಿಯತ್ತಿನ ಶ್ವಾನದ ಕಥೆ.
ವರ್ಷಾನುಗಟ್ಟಲೇ ಹಚಿಕೋ ಕಥೆ ಸಾಹಿತ್ಯಿಕವಾಗಿ ಹಾಗೂ ಸಿನಿಮಾವಾಗಿ ಎಲ್ಲೆಡೆ ಪಸರಿಸಲ್ಪಟ್ಟಿದೆ. ಜಪಾನ್ ನಲ್ಲಿ ಪುಟ್ಟ ಮಕ್ಕಳಿಗೆ ಹಚಿಕೋ ಕಥೆಯನ್ನು ಹೇಳುವುದು ಇಂದಿಗೂ ಮುಂದುವರಿದಿದೆ.
ಆ ನಿಟ್ಟಿನಲ್ಲಿ ಹಚಿಕೋ “ನಿಯತ್ತಿಗೊಂದು” ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ. ಇದೀಗ ಇಡೀ ಜಗತ್ತು ಪ್ರೀತಿಯ ಹಚಿಕೋ ಶ್ವಾನದ 100ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಶಿಬುಯಾ ನಿಲ್ದಾಣದಲ್ಲಿನ ಹಚಿಕೋ ಪ್ರತಿಮೆ ಹಿಂದಿನ ಕಥೆ…
ಹಚಿಕೋ ಎಂಬ ಅಕಿತಾ ಇನು ಶ್ವಾನವನ್ನು ಜಪಾನ್ ನ ಕೃಷಿ ಪ್ರಾಧ್ಯಾಪಕ ಹಿಡೆಸಾಬುರೊ ಯುನೊ ಪ್ರೀತಿಯಿಂದ (1923) ಸಾಕಿದ್ದರು. ಹೀಗೆ ಯುನೋ ಹಾಗೂ ಶಿಬುಯಾ ರೈಲ್ವೆ ನಿಲ್ದಾಣದ ನಡುವೆ ಹಚಿಕೋ ಶ್ವಾನಕ್ಕೆ ಅವಿನಾಭಾವ ಸಂಬಂಧ ಬೆಸೆದು ಹೋಗಿತ್ತು. ದುರಾದೃಷ್ಟ ಎಂಬಂತೆ 1925ರಲ್ಲಿ ಪ್ರೊಫೆಸರ್ ಯುನೊ ರಕ್ತನಾಳ ಒಡೆದುಹೋಗಿ ಕಾಲೇಜಿನಲ್ಲೇ ವಿಧಿವಶರಾಗಿಬಿಟ್ಟಿದ್ದರು. ಹಚಿಕೋ ಮತ್ತು ಪ್ರೊ.ಯುನೊ ನಡುವೆ ಕೇವಲ 16 ತಿಂಗಳ ಒಡನಾಟವಾಗಿದ್ದರೂ ಕೂಡಾ ಆ ಶ್ವಾನದ ನಿಯತ್ತು ಮಾತ್ರ ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ತನ್ನ ಪ್ರೀತಿಯ ಒಡೆಯನಿಗಾಗಿ ಹಚಿಕೋ ರೈಲ್ವೆ ನಿಲ್ದಾಣ ಬಿಟ್ಟು ಕದಲಿಲ್ಲವಾಗಿತ್ತು.!
ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಹತ್ತಿ-ಇಳಿದು ಹೋಗುತ್ತಿದ್ದರು. ಆದರೆ ಹಚಿಕೋ ಶ್ವಾನದ ವರ್ತನೆಯನ್ನು ಯಾರೂ ಗಮನಿಸಿರಲಿಲ್ಲವಾಗಿತ್ತು. ಕೆಲವು ಸಮಯದ ನಂತರ ಶಿಬುಯಾ ರೈಲ್ವೆ ನಿಲ್ದಾಣದ ಪ್ರಯಾಣಿಕರಿಗೆ ಹಚಿಕೋ ಶ್ವಾನದ ವರ್ತನೆ ಬಗ್ಗೆ ಅಸಡ್ಡೆ ತೋರಿದ್ದರು. ಆದರೆ ಟೋಕಿಯೊದ ಶಿಂಬುನ್ ದೈನಿಕದಲ್ಲಿ ಹಚಿಕೋ ಶ್ವಾನದ ಕುರಿತು ದೊಡ್ಡ ಲೇಖನ ಪ್ರಕಟವಾದ ಮೇಲೆ ಸಾರ್ವಜನಿಕರ ಗಮನ ಸೆಳೆಯುವಂತಾಗಿತ್ತು. ಹಚಿಕೋದ ನಿಯತ್ತಿಗೆ ಮಾರುಹೋದ ಪ್ರಯಾಣಿಕರು ಊಟೋಪಚಾರ ನೀಡಿ ಸತ್ಕರಿಸತೊಡಗಿದ್ದರು. ಹೀಗೆ ದಶಕಗಳ ಕಾಲ ತನ್ನ ಪ್ರೀತಿಯ ಮಾಸ್ಟರ್ ಗಾಗಿ ಕಾದು ಕುಳಿತಿದ್ದ ಹಚಿಕೋ 1935ರ ಮಾರ್ಚ್ 8ರಂದು ಇಹಲೋಕ ತ್ಯಜಿಸಿತ್ತು. ಅದರ ಸವಿ ನೆನಪಿಗಾಗಿ ಇಂದಿಗೂ ಟೋಕಿಯೋದ ಶಿಬುಯಾ ಅಂತಾರಾಷ್ಟ್ರೀಯ ರೈಲ್ವೆ ನಿಲ್ದಾಣದಲ್ಲಿ ಹಚಿಕೋದ ಕಂಚಿನ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತಿದೆ.