Advertisement

ಹೋಳಿ ಶಾಂತಿಯುತವಾಗಿ ಆಚರಿಸಿ

03:43 PM Mar 03, 2017 | |

ಕಲಬುರಗಿ: ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಮಾ. 12ರಂದು ಕಾಮದಹನ ಮತ್ತು ಮಾ.13ರಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌ ಸಾರ್ವಜನಿಕರಲ್ಲಿ ಮನವಿ ಮಾಡಿದರು. 

Advertisement

ಗುರುವಾರ ಕಲಬುರಗಿಯಲ್ಲಿ ಹೋಳಿ ಹಬ್ಬ ಆಚರಣೆಯ ಅಂಗವಾಗಿ ಕರೆಯಲಾದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಹಾಗೂ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಶಾಂತಿ ಸಮಿತಿ ಸದಸ್ಯರು ಎಚ್ಚರಿಕೆ ವಹಿಸಬೇಕೆಂದರು. ಹಬ್ಬದ ದಿನಗಳಂದು ಸಾರ್ವಜನಿಕರು ಚರ್ಮಕ್ಕೆ ಹಾನಿಕಾರಕವಲ್ಲದ ನೈಸರ್ಗಿಕವಾದ ಬಣ್ಣ ಮಾತ್ರ ಉಪಯೋಗಿಸಬೇಕು. ರಾಸಾಯನಿಕ ಬಣ್ಣ ಹಚ್ಚುವವರ ಹಾಗೂ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. 

ಹಬ್ಬ ಆಚರಣೆ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಣ್ಣವನ್ನು ಯಾರಿಗೂ ಒತ್ತಾಯವಾಗಿ ಹಚ್ಚದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಹಬ್ಬವನ್ನು ಸಂತೋಷದಿಂದ ಆಚರಿಸಬೇಕೇ ವಿನಃ ಯಾರಿಗೂ ತೊಂದರೆಯಾಗಬಾರದು. ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.

ರವಿವಾರ ಮತ್ತು ಸೋಮವಾರಗಳಂದು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಬೇಕು ಮತ್ತು ಅವಶ್ಯವಿದ್ದ ಕಡೆ ಟ್ಯಾಂಕರ್‌ ಮೂಲಕ ಸಹ ನೀರು ಪೂರೈಸಬೇಕು. ಇದಕ್ಕಾಗಿ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಿ ವಿವಿಧ ಬಡಾವಣೆಗಳಿಗೆ ನೀರು ಪೂರೈಸುವ ಅವಧಿಯನ್ನು ಪ್ರಚುರಪಡಿಸಬೇಕು ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ಹಬ್ಬ ಆಚರಣೆಯ ಎರಡೂ ದಿನಗಳಂದು ಸಂಜೆಯಿಂದ ಸಮರ್ಪಕ ರೀತಿಯಲ್ಲಿ ಹಾಗೂ ನಿರಂತರವಾಗಿ ವಿದ್ಯುತ್‌ ಪೊರೈಕೆಯಾಗುವಂತೆ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆಯಿಂದ ಕಾಮದಹನ ಬಳಿಕ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕಲ್ಲದೇ ನಗರದಾದ್ಯಂತ ಬೀದಿ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ನಗರದ ಬೀದಿ ದೀಪಗಳನ್ನು ಸಹ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಹಬ್ಬ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರಿಂದ ಸೂಕ್ತ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಈ ಕೊಠಡಿ ದೂರವಾಣಿ ಸಂಖ್ಯೆ ಪ್ರಚುರಪಡಿಸಲಾಗುವುದು ಎಂದರು.

ಹೆಚ್ಚುವರಿ ಎಸ್‌.ಪಿ. ಜಯಪ್ರಕಾಶ ಮಾತನಾಡಿ, ಮೋಟರ್‌ ಬೈಕ್‌ಗಳ ಸೈಲೆನ್ಸರ್‌ ತೆಗೆದು ಓಡಿಸುವವರ ವಿರುದ್ಧ ಸಹ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಶಾಂತಿಭಂಗವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಯಾವುದೇ ಅಹಿತರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. 

ಕಿಡಿಗೇಡಿಗಳನ್ನು ನಿರ್ಬಂಧಿಸಲು ಅನುಕೂಲವಾಗುವಂತೆ ಹೆಚ್ಚು ಸಂಚಾರಿ ಪೊಲೀಸ್‌ ತಂಡಗಳನ್ನು ರಚಿಸಲಾಗುವುದಲ್ಲದೇ ಹೋಳಿ ಹಬ್ಬದ ಪ್ರಯುಕ್ತ ಎರಡು ದಿನಗಳಂದು ವ್ಯಾಪಕ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಹಬ್ಬದ ದಿನಗಳಂದು ಕಾನೂನು ಉಲ್ಲಂಘನೆ ಮಾಡದಂತೆ ಯುವಕರಿಗೆ ಶಾಂತಿ ಸಮಿತಿ ಸದಸ್ಯರು ತಿಳಿಹೇಳಬೇಕು ಎಂದರು.

ಸಮಿತಿ ಸದಸ್ಯ ಹಾಗೂ ನಾಗರಿಕರಾದ ಬಾಬುರಾವ ಜಹಾಗಿರದಾರ, ಅಪ್ಪಾರಾವ ಅಕ್ಕೋಣಿ, ರಮೇಶ ಕಮಲಾಪುರ,  ಶಿವಾನಂದ ತಿವಾರೂರ, ಶμàಕ ಅಹ್ಮದ್‌ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ಹಿರಿಯ ನಾಗರಿಕರು ಸಲಹೆ ನೀಡಿದರು. ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next