ಬಾದಾಮಿ: ಕೊರೊನಾ ಮೂರನೇ ಅಲೆ ಭೀತಿ ಇರುವುದರಿಂದ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವವನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಆಚರಿಸಬೇಕು ಎಂದು ಬಾದಾಮಿ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸೂಚಿಸಿದರು.
ಜ.17ರಂದು ಬನಶಂಕರಿ ಜಾತ್ರೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಧಿ ಕಾರಿಗಳು, ಚುನಾಯಿತ ಪ್ರತಿನಿಧಿ ಗಳು ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರ ಜತೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು. ಬಾದಾಮಿಯಲ್ಲಿ ಕಳೆದ ಮೂರು ತಿಂಗಳಿಂದ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕ್ಷೇತ್ರದಲ್ಲಿ ಶೇ.100 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಶೇ.75 ಜನರಿಗೆ ಎರಡನೇ ಡೋಸ್ ನೀಡಲಾಗಿದೆ.ಎರಡನೇ ಡೋಸ್ ಪಡೆದವರಿಗೂ ಕೊರೊನಾ ಸೋಂಕು ಬಂದಿದೆ. ಆದರೆ ಅವರಲ್ಲಿ ಸೋಂಕಿನ ಪರಿಣಾಮ ಕಡಿಮೆ ಇರುತ್ತದೆ. ಆದರೂ ಮುಂಗಾಗ್ರತಾ ಕ್ರಮ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ಸೋಂಕು ವ್ಯಾಪಕವಾಗಿ ಹರಡದ ರೀತಿ ನೋಡಿಕೊಳ್ಳಬೇಕೆಂದರು. ಕಳೆದ ಎರಡು ವರ್ಷಗಳಿಂದ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನೆರವೇರಿಸಲು ಸಾಧ್ಯವಾಗಲಿಲ್ಲ. ಜಾತ್ರೆಗೆ ಮುನ್ನ ಕೆಲ ಅಭಿವೃದ್ಧಿ ಕೆಲಸಗಳು ಆಗಬೇಕು.
ದೇವಾಲಯ ಮುಂದೆ ಇರುವ ಕಲ್ಯಾಣಿ ಭರ್ತಿಯಾಗಬೇಕು. ಜಾತ್ರೆಗೆ ಸಾವಿರಾರು ಮಂದಿ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು. ಜಾತ್ರೆ ವಿಚಾರದಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಂಬಂಧ ಸರ್ಕಾರ ಹಾಗೂ ಜಿಲ್ಲಾ ಧಿಕಾರಿಗಳ ಜತೆ ಮಾತನಾಡುತ್ತೇನೆಂದರು.
ಜಾತ್ರೆ ನಡೆಯದಿದ್ದರೆ ಪ್ರತಿವರ್ಷ ನಾಟಕ ನಡೆಸುವವರಿಗೆ, ಅಂಗಡಿ ಮುಂಗ್ಗಟ್ಟು ಹಾಗೂ ಜೀವನೋಪಾಯಕ್ಕಾಗಿ ಜಾತ್ರೆಯನ್ನೇ ಅವಲಂಬಿಸಿ ರುವವರಿಗೆ ತೊಂದರೆಯಾಗುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಟಿ.ಭೂಬಾಲನ್, ಬಾದಾಮಿ ತಹಶೀಲ್ದಾರ್ ಸುಹಾಸ ಇಂಗಳೆ, ಆರೋಗ್ಯಾ ಧಿಕಾರಿಗಳು ಇದ್ದರು.